ಮಡಿಕೇರಿ ಜೂ.11 : ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯೊಂದು ತೋಟ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯ ಮೇಲೆ ದಾಳಿಗೆ ಯತ್ನಿಸಿದ ಘಟನೆ ಸಿದ್ದಾಪುರ ಸಮೀಪದ ನಲ್ವತ್ತೆಕರೆ ಗ್ರಾಮದಲ್ಲಿ ಇಂದು ನಡೆದಿದೆ.
ಕಾಡಾನೆ ದಾಳಿಯಿಂದ ಗಾಯಗೊಂಡ ಕಾರ್ಮಿಕ ಮಹಿಳೆ ಕವಿತಾ (40) ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನೆಲ್ಯಹುದಿಕೇರಿ, ಅತ್ತಿಮಂಗಲ, ನಲ್ವತ್ತೆಕರೆ ಮತ್ತಿತರ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಗೊಂಡಿದ್ದರು. ಬೆಳಗ್ಗಿನಿಂದ ಹುಡುಕಾಟ ನಡೆಸಿದರೂ ಕಾಡಾನೆಗಳು ಪತ್ತೆಯಾಗಿರಲಿಲ್ಲ. ನಂತರ ಮಧ್ಯಾಹ್ನದ ವೇಳೆಯಲ್ಲಿ ಕಾಫಿ ತೋಟವೊಂದರಲ್ಲಿ ಒಂಟಿ ಸಲಗ ಒಂದು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಫಿ ತೋಟದ ಮಾರ್ಗದ ಮಧ್ಯ ಭಾಗದಿಂದ ಅರಣ್ಯಕ್ಕೆ ಓಡಿಸಲು ಮುಂದಾಗಿದ್ದರು. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿದ ಕಾಡಾನೆ ಮನೆಯೊಂದರ ಹಲಸಿನ ಮರದ ಸಮೀಪ ನಿಂತಿತು. ಈ ಸಂದರ್ಭ ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳುತ್ತಿದ್ದ ಕವಿತಾ ಅವರನ್ನು ಕಂಡ ಕಾಡಾನೆ ದಾಳಿಗೆ ಯತ್ನಿಸಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಹಿಳೆಯನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದರು. ನಂತರ ಕಾಡಾನೆಯನ್ನ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.










