ಸುಂಟಿಕೊಪ್ಪ NEWS DESK ಜೂ.14 : ವಿದ್ಯುತ್ ಕಂಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಸಿಬ್ಬಂದಿಯೊಬ್ಬರು ಕಂಬ ಸಹಿತ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಐತನಳ್ಳಿ ಗ್ರಾಮದ ನಂದೀಶ(32) ಎಂಬುವವರೇ ಗಾಯಗೊಂಡ ಸಿಬ್ಬಂದಿಯಾಗಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುಂಟಿಕೊಪ್ಪ ಪಟ್ಟಣದ ಅಯ್ಯಪ್ಪ ದೇವಾಲಯದ ಬಳಿ ನೂತನವಾಗಿ ಅಳವಡಿಸಿರುವ ವಿದ್ಯುತ್ ಕಂಬವನ್ನೇರಿ ನಂದೀಶ್ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭ ವಿದ್ಯುತ್ ಕಂಬ ಬಿದ್ದಿದ್ದು, ಇದರೊಂದಿಗೆ ನಂದೀಶ್ ಕೂಡ ಬಿದ್ದು ಸೊಂಟಕ್ಕೆ ಗಂಭೀರ ಗಾಯವಾಗಿದೆ. ಮತ್ತೊಂದು ಕಂಬದಲ್ಲಿದ್ದ ಯೋಗೇಶ್ ಎಂಬುವವರು ಕೂಡ ಬಿದ್ದು ಕೈಮೂಳೆ ಮುರಿತಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ಮಾರ್ಗದ ಕಾಮಗಾರಿ ಅವೈಜ್ಞಾನಿಕವಾಗಿರುವುದೇ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.










