ಮಡಿಕೇರಿ ಜೂ.19 NEWS DESK : ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಮೀನು, ಮಾಂಸ ಮಾರುಕಟ್ಟೆಯ ಉಸ್ತುವಾರಿ ಸಿಬ್ಬಂದಿ ಬಶೀರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ತನಿಖೆ ನಡೆಸಲು ನಗರಸಭೆಯ ಸಾಮಾನ್ಯ ಸಭೆ ನಿರ್ಧಾರ ಕೈಗೊಂಡಿದೆ. ನಗರ ಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯ ಮೊದಲ ಸಾಮಾನ್ಯ ಸಭೆ ಬುಧವಾರ ನಡೆಯಿತು. ಸಭೆಯ ಪ್ರಾರಂಭದಲ್ಲೇ ವಿಚಾರ ಪ್ರಸ್ತಾಪಿಸಿದ ಸದಸ್ಯ ಮನ್ಸೂರ್, ನಗರದ ಮಾರುಕಟ್ಟೆ ಆವರಣದಲ್ಲಿ ನಗರ ಸಭೆ ವತಿಯಿಂದ ಕೇವಲ ಒಂದು ಕುರಿ ಮಾಂಸ ಮಳಿಗೆಯನ್ನು ಟೆಂಡರ್ ಕರೆಯಲಾಗಿದೆ. ಆ ಮಳಿಗೆಯ ಪಕ್ಕದಲ್ಲೇ ಮತ್ತೊಂದು ಕುರಿ ಮಾಂಸ ಮಳಿಗೆ ಇದ್ದು, ಅದನ್ನು ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ಮತ್ತೊಂದು ಮಳಿಗೆಯ ಹಣವನ್ನು ತಿನ್ನುತ್ತಿರುವವರು ಯಾರು..? ಹೀಗೆ ಹಲವು ವರ್ಷಗಳಿಂದ ನಗರ ಸಭೆಗೆ ವಂಚಿಸಲಾಗುತ್ತಿದೆ. ಈ ಬಗ್ಗೆ ನಗರ ಸಭೆ ಸೂಕ್ತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಇತರ ಸದಸ್ಯರು ಕೂಡ ಪಕ್ಷಾತೀತವಾಗಿ ಧ್ವನಿಗೂಡಿಸಿ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸುವಂತೆ ಮಾರುಕಟ್ಟೆ ಉಸ್ತುವಾರಿ ನೀಡಲಾಗಿದ್ದ ನಗರ ಸಭೆ ಸಿಬ್ಬಂದಿ ಬಶೀರ್ ಅವರಿಗೆ ಅಧ್ಯಕ್ಷರು ಸೂಚಿಸಿದರು. ಈ ಸಂದರ್ಭ ಮಾರುಕಟ್ಟೆಯಲ್ಲಿ ಕೇವಲ ಒಂದು ಕುರಿ ಮಾಂಸ ಮಳಿಗೆಯನ್ನು ಮಾತ್ರವೇ ಟೆಂಡರ್ ಮಾಡಲಾಗಿದೆ. ಅದರ ಪಕ್ಕದ ಮಳಿಗೆಗೆ ಬಾಗಿಲು ಇಲ್ಲದ ಕಾರಣ ಆ ಮಳಿಗೆಯನ್ನು ಕುರಿ ಮಾಂಸ ತಯಾರಿ ಮಾಡಲು ಮಾತ್ರವೇ ಮೊದಲ ಅಂಗಡಿಯನ್ನು ಟೆಂಡರ್ ಕರೆದವರು ಬಳಸುತ್ತಿದ್ದಾರೆ ಎಂದು ಉತ್ತರಿಸಿದರು. ಇದಕ್ಕೆ ಆಕ್ಷೇಪವೆತ್ತಿದ ಮನ್ಸೂರ್ ಸಭೆಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ. ಮತ್ತೊಂದು ಮಳಿಗೆಯಲ್ಲೂ ವ್ಯಾಪಾರ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಸ್ಥಳದ ವಿಡಿಯೋ ತರಿಸುವಂತೆ ಪಟ್ಟು ಹಿಡಿದರು. ಈ ವೇಳೆ ನಾಮ ನಿರ್ದೇಶಿತ ಸದಸ್ಯ ಯಾಕೂಬ್ ಅವರು ಮಾರುಕಟ್ಟೆ ವಿಡಿಯೋ ದೃಶ್ಯವನ್ನು ಪ್ರದರ್ಶಿಸಿ ಮತ್ತೊಂದು ಮಳಿಗೆಯಲ್ಲೂ ವ್ಯಾಪಾರ ನಡೆಸುತ್ತಿರುವುದುನ್ನು ಸಭೆಯ ಮುಂದಿಟ್ಟರು. ಈ ಅವ್ಯವಹಾರ ಹಲವು ವರ್ಷಗಳಿಂದಲೂ ನಡೆಯುತ್ತಿದೆ ಎಂದು ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಪೌರಾಯುಕ್ತ ಮಾರುಕಟ್ಟೆ ಬಗ್ಗೆ ದೂರುಗಳು ಬಂದ ಸಂದರ್ಭವೇ ಬಶೀರ್ ಅವರನ್ನು ಆ ಕರ್ತವ್ಯದಿಂದ ಬಿಡುಗಡೆ ಮಾಡಿ ಸತ್ಯ ನಾರಾಯಣ ಹಾಗು ಹರಿಣಿ ಅವರಿಗೆ ಜವಾಬ್ದಾರಿ ನೀಡುವಂತೆ ಸೂಚಿಸಲಾಗಿತ್ತು. ಹೀಗಿದ್ದರೂ ಬಶೀರ್ ಆ ಇಬ್ಬರು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿರಲಿಲ್ಲ. ಆದ ಕಾರಣ ಆ ಇಬ್ಬರು ಅಧಿಕಾರಿಗಳು ಲಿಖಿತ ರೂಪದಲ್ಲಿ ಅಧಿಕಾರಿ ವಹಿಸದಿರುವ ಬಗ್ಗೆ ವರದಿ ನೀಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಸಿಬ್ಬಂದಿ ಬಶೀರ್ ವಿರುದ್ದ ತನಿಖೆ ನಡೆಸುವಂತೆ ಸದಸ್ಯರಾದ ಅರುಣ್ ಶೆಟ್ಟಿ, ಸತೀಶ್, ಬಶೀರ್, ಮನ್ಸೂರ್, ಯಾಕೂಬ್ ಸಹಿತ ಹಲವು ಸದಸ್ಯರು ಆಗ್ರಹಿಸಿದರು. ಕೆ.ಎಸ್.ರಮೇಶ್ ಮಾತನಾಡಿ, ಸಿಬಂದಿ ಬಶೀರ್ ವಿರುದ್ದ ಹಲವು ದೂರುಗಳು ಕೇಳಿ ಬಂದಿವೆ. ಇದೀಗ ಮಾರುಕಟ್ಟೆ ಉಸ್ತುವಾರಿ ಜವಾಬ್ದಾರಿಯನ್ನೂ ಬೇರೆಯವರಿಗೆ ಹಸ್ತಾಂತರಿಸದೇ ನಿರ್ಲಕ್ಷ್ಯ ಮಾಡುವ ಮೂಲಕ ಪೌರಾಯುಕ್ತರ ಸೂಚನೆಯನ್ನೂ ಧಿಕ್ಕರಿಸಲಾಗಿದೆ. ಮಾತ್ರವಲ್ಲದೇ ಕೌನ್ಸಿಲ್ ಸಭೆಗೂ ತಪ್ಪು ಮಾಹಿತಿ ನೀಡುವ ಮೂಲಕ ಸಭೆಯ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಬಶೀರ್‍ನನ್ನು ತಕ್ಷಣವೇ ಕರ್ತವ್ಯದಿಂದ ವಜಾ ಮಾಡಿ ಆತನ ವಿರುದ್ದ ತನಿಖೆಗೆ ಸೂಚಿಸುವಂತೆ ಆಗ್ರಹಿಸಿದರು. ಇತರ ಸದಸ್ಯರು ಕೂಡ ಇದಕ್ಕೆ ಧ್ವನಿಗೂಡಿಸಿದರು. ಸಭೆಯ ಅಧ್ಯಕ್ಷೆ ಕಲಾವತಿ ಅವರು ಸಿಬ್ಬಂದಿ ಬಶೀರ್‍ನನ್ನು ಕರ್ತವ್ಯದಿಂದ ಅಮಾನತು ಮಾಡಿ ತನಿಖೆ ನಡೆಸಲು ಆದೇಶ ನೀಡಿದರು.
*ಹೆಚ್ಚಿನ ಅನುದಾನಕ್ಕೆ ನಿಯೋಗ* : ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ನಗರ ಸಭೆಯಿಂದ ಸದಸ್ಯರ ವಾರ್ಡ್‍ಗಳಿಗೆ ಹಂಚಿಕೆ ಮಾಡಲಾಗುತ್ತಿರುವ ಅನುದಾನದಲ್ಲಿ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಅನುದಾನವೂ ನಗರಸಭೆಗೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಸರ್ವ ಪಕ್ಷ ಸದಸ್ಯರ ನಿಯೋಗ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಅನುದಾನಕ್ಕೆ ಮನವಿ ಮಾಡಬೇಕಿದೆ ಎಂದು ಹೇಳಿದರು. ಇದಕ್ಕೆ ಎಲ್ಲಾ ಸದಸ್ಯರು ಕೂಡ ಧ್ವನಿಗೂಡಿಸಿದರು.
*ಪ್ಲಾಸ್ಟಿಕ್ ನಿಷೇಧಿಸಿ* ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡದಂತೆ ಈ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಕೂಡ ಇಂದಿಗೂ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳನ್ನು ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಕೌನಿಲ್ ಸಭೆಯ ನಿರ್ಣಯಗಳಿಗೆ ಬೆಲೆಯೇ ಇಲ್ಲವೇ ಎಂದು ಸದಸ್ಯ ಅಪ್ಪಣ್ಣ ಸಭೆಯ ಗಮನ ಸೆಳೆದರು. ಇದಕ್ಕೆ ಸದಸ್ಯೆ ಶ್ವೇತಾ ಪ್ರಶಾಂತ್ ಧ್ವನಿಗೂಡಿಸಿದರು. ಮೊದಲ ಮಳೆಗೆ ಚರಂಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ನಿಂತು ಮಳೆ ನೀರು ಮದುವೆ ನಡೆಯುತ್ತಿದ್ದ ಖಾಸಗಿ ಸಭಾಂಗಣ ಮತ್ತು ಮಣೆಗಳಿಗೆ ನುಗ್ಗಿದ ಘಟನೆಗಳನ್ನು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ವಿಭಾಗದ ಅಧಿಕಾರಿ ಹರಿಣಿ, ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ 1 ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮಾರಾಟದ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ಇನ್ನುಳಿದಂತೆ ರಸ್ತೆ, ಬೀದಿ ದೀಪಗಳ ಅವ್ಯವಸ್ಥೆ, ತಡೆಗೋಡೆ ನಿರ್ಮಾಣ, ಕುಡಿಯುವ ನೀರು, ರಾಜಾಸೀಟು ರಸ್ತೆಯಲ್ಲಿ ಪಾರ್ಕಿಂಗ್ ವಿಚಾರ, ಮಾರುಕಟ್ಟೆ, ಅಮೃತ್-2 ಯೋಜನೆ, ಫಾರಂ ನಂಬರ್ 3, ಸರಕಾರ ಅನುದಾನ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು.












