


ನಾಪೋಕ್ಲು ಜೂ.23 NEWS DESK : ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಿ.ಎಂ.ಶಾರದ ಮಾತನಾಡಿ ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸದೃಢ ಆಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಕಲ್ಯಾಟಂಡ ಪೂಣಚ್ಚ, ಸಂಸ್ಥೆಯ ನಿರ್ದೇಶಕರು, ಶಿಕ್ಷಕ ವೃಂದದವರು ಹಾಜರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಸರಿತ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳನ್ನು ನಡೆಸಿಕೊಟ್ಟರು. ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯ ಅಂಗವಾಗಿ ಯೋಗದ ಐತಿಹಾಸಿಕ ಹಿನ್ನಲೆ ಮತ್ತು ಯುವ ಪೀಳಿಗೆಗೆ ಯೋಗದ ಮಹತ್ವವನ್ನು ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕ ಎಂ.ಶಂಕರನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ದೈಹಿಕ ಶಿಕ್ಷಕ ಕುಶಾಲಪ್ಪ ನಡೆಸಿಕೊಟ್ಟರು. ಯೋಗದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸ್ಪರ್ಧೆಯ ಬಹುಮಾನಗಳ ಪ್ರಾಯೋಜಕತ್ವವನ್ನು ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕಾರಿ ನಿರ್ದೇಶಕ ಯು.ಪಿ.ಜಯರಾಮ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ, ಅಧ್ಯಾಪಕ ವೃಂದದವರು ಭಾಗವಹಿಸಿದರು. ಮುಖ್ಯ ಶಿಕ್ಷಕ ಎ.ಐತ್ತಪ್ಪ ಸ್ವಾಗತಿಸಿದರು. ಉಪನ್ಯಾಸಕ ಚೆನ್ನಬಸಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ










