

ನಾಪೋಕ್ಲು ಜೂ.25 NEWS DESK : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದ್ದು ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಬಿರುಸಿನ ಮಳೆಯೊಂದಿಗೆ ಗಾಳಿಯೂ ಬೀಸಿ ಜನಜೀವನ ಅಸ್ತವ್ಯಸ್ತಗೊಂಡಿತು. ರಭಸದ ಗಾಳಿಯಿಂದ ಹಲವೆಡೆ ಮನೆ, ಶೆಡ್‍ಗಳಿಗೆ ಹಾನಿಯಾಗಿದೆ. ಮನೆಗೆ ಹಾಸಿದ್ದ ಶೀಟ್‍ಗಳು ಹಾರಿಹೋಗಿ ನಷ್ಟ ಸಂಭವಿಸಿದೆ. ಕರಡ ಗ್ರಾಮದ ಟಿ.ಡಿ.ಚಿಣ್ಣಪ್ಪ ಎಂಬವರ ವಾಸದ ಮನೆಯ ಪಕ್ಕದಲ್ಲಿದ್ದ ಶೌಚಾಲಯ ಕುಸಿದು ಬಿದ್ದು, ನಷ್ಟ ಸಂಭವಿಸಿದೆ. ಕೊಳಕೇರಿ ಗ್ರಾಮದ ತಟ್ಟಂಡ ವಿಮಲಾ ಅವರ ವಾಸದ ಮನೆಯ ಮೇಲ್ಛಾವಣಿ ಮಳೆಯಿಂದ ಹಾನಿಯಾಗಿದೆ. ಬಾವಲಿ ಗ್ರಾಮದ ಪಾಂಡಾಂಡ ಕುಟುಂಬಸ್ಥರ ಐನ್ ಮನೆಗೆ ಕುಸಿದು ಬಿದ್ದು ಪೂರ್ಣ ಹಾನಿಯಾಗಿರುತ್ತದೆ. ಐನ್ ಮನೆಯಲ್ಲಿ ಯಾರು ವಾಸ ಇಲ್ಲದೇ ಇದ್ದುದರಿಂದ ಸಮಸ್ಯೆ ಉಂಟಾಗಿಲ್ಲ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಗ್ರಾಮಲೆಕ್ಕಿಗರು, ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಎರಡು ದಿನಗಳಿಂದ ಬಿರುಸುಗೊಂಡ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಗದ್ದೆ ತೋಟಗಳು ಮುಳುಗಡೆಯಾಗಿ ಸಮಸ್ಯೆ ಎದುರಾಗಿದೆ. ಇಲ್ಲಿಗೆ ಸಮೀಪದ ಕಾವೇರಿ ನದಿ ಪಾತ್ರದಲ್ಲಿರುವ ಚೆರಿಯ ಪರಂಬುವಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದಾಗಿ ಕಂದಾಯ ಇಲಾಖೆಯ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ವರದಿ : ದುಗ್ಗಳ ಸದಾನಂದ.











