
ನಾಪೋಕ್ಲು ಜೂ.27 NEWS DESK : ಕೊಡಗಿನಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ನಾಪೋಕ್ಲು ವ್ಯಾಪ್ತಿಯ ಹಲವೆಡೆ ರಸ್ತೆಗಳು ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಇಂತಹ ಬಿರುಸಿನ ಮಳೆಯ ನಡುವೆ ಚೆರಿಯಪರಂಬುವಿನ ವರ ಹಾಗೂ ಮಡಿಕೇರಿಯ ವಧು ವಿನ ವಿವಾಹ ಸಮಾರಂಭ ಜರುಗಿದೆ. ಕಳೆದ ವಾರ ಮಡಿಕೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಿದ ಬಳಿಕ ವಧುವನ್ನು ಚೆರಿಯಪರಂಬುವಿನ ವರನ ಮನೆಗೆ ಕಳುಹಿಸಿಕೊಡಲಾಗಿತ್ತು. ಹಿಂತಿರುಗಿ ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯದಂತೆ ವಧುವಿನ ಮನೆಯವರು ವಧುವನ್ನು ಕರೆದುಕೊಂಡು ಹೋಗಲು ವರನ ಮನೆಗೆ ಆಗಮಿಸುವಾಗ ಮಳೆ ಪ್ರವಾಹದಿಂದಾಗಿ ನಾಪೋಕ್ಲು – ಚೆರಿಯಪರಂಬು ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಂದವರು ಪರ್ಯಾಯ ಮಾರ್ಗವಾಗಿ ತೆಪ್ಪ ತರಿಸಿ ತೆಪ್ಪದ ಮೂಲಕ ಪ್ರವಾಹದ ನೀರಿನಲ್ಲಿ ಸಾಗಿ ಚೆರಿಯಪರಂಬುವಿನಲ್ಲಿರುವ ವರನ ಮನೆ ತಲುಪಿದ್ದಾರೆ. ವಧುವನ್ನು ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯ ಪಾಲಿಸಲು ಮಹಿಳೆಯರು, ಮಕ್ಕಳು ತೆಪ್ಪದಲ್ಲಿ ಸಾಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
ವರದಿ : ದುಗ್ಗಳ ಸದಾನಂದ.









