ಮಡಿಕೇರಿ ಜೂ.28 NEWS DESK : ಕೊಡವ ಮಕ್ಕಡ ಕೂಟದ 114ನೇ ಪುಸ್ತಕ, ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ರಚಿತ 4ನೇ ಕೃತಿ “ಚೀತೆರ ಕಾಳ ಮುತ್ತ್ ಮಾಲೆ” ಕೊಡವ ಕವನ ಸಂಕಲನ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೇಖಕಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಅವರು ಭಾಷೆಯ ಬೆಳವಣಿಗೆಯಲ್ಲಿ ಸಾಹಿತ್ಯ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದರು. ಕಥೆ, ಕಾದಂಬರಿ, ನಾಟಕ, ಕವನ ಸಂಕಲನಗಳು ಸಾಹಿತ್ಯ ಕ್ಷೇತ್ರದ ಸುಂದರ ಮತ್ತು ಶಕ್ತಿಯುತ ಪ್ರಕಾರಗಳಾಗಿವೆ. ಕವನಗಳು ಭಾಷೆಯ ಬಲವನ್ನು ಹೆಚ್ಚಿಸುತ್ತವೆ, ಓದುಗರ ಜೊತೆ ಕವನ ಮಾತನಾಡುತ್ತದೆ, ಮನ ಮುಟ್ಟುತ್ತದೆ ಮತ್ತು ಹೊಸ ಆಯಾಮಗಳಿಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು. ಹಲವು ಪುಸ್ತಕಗಳನ್ನು ರಚಿಸಿರುವ ಲೇಖಕಿ ಮಾಳೇಟಿರ ಸೀತಮ್ಮ ಅವರ ಸಾಹಿತ್ಯ ಸೇವೆ ನಿರಂತರವಾಗಿರಲಿ, ಮತ್ತಷ್ಟು ಕೃತಿ ಹೊರ ಬರಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರದ ಅನುದಾನವಿಲ್ಲದಿದ್ದರೂ ಸಾಹಿತ್ಯ ಬೆಳವಣಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಜಿಲ್ಲೆಯ ಹಲವು ಬರಹಗಾರರು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕೂಟದ ಹಲವು ಪುಸ್ತಕಗಳಿಗೆ ಪ್ರಶಸ್ತಿಗಳು ಲಭಿಸಿದೆ. ಇನ್ನು ಮುಂದೆಯೂ ಕೂಟ ಬರಹಗಾರರಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು. ಬರಹಗಾರ್ತಿ ಮಾಳೇಟಿರ ಸೀತಮ್ಮ ಉತ್ತಮ ಬರಹಗಾರರಾಗಿದ್ದು, ಕೊಡವ ಸಂಸ್ಕೃತಿ, ಆಚಾರ ವಿಚಾರ ಹಾಗೂ ಕೆಲವು ವ್ಯಕ್ತಿಗಳ ಪರಿಚಯವನ್ನು ಕವನದ ಮೂಲಕ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. “ಚೀತೆರ ಕಾಳ ಮುತ್ತ್ ಮಾಲೆ” ಕೊಡವ ಕವನ ಸಂಕಲನದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಮಾತನಾಡಿ, ಪುಸ್ತಕವು 50 ಕವನಗಳನ್ನು ಒಳಗೊಂಡಿದ್ದು, ಸುಮಾರು ಐದು ವರ್ಷಗಳ ದಾಖಲೆಗಳ ಕವನಗಳಾಗಿವೆ. ಅಲ್ಲದೇ ಅಧ್ಯಯನದ ಸಂದರ್ಭ ಸಿಕ್ಕ ಕೆಲವು ವಿಚಾರಗಳನ್ನು ಕವನ ರೂಪದಲ್ಲಿ ಹೊರತರಲಾಗಿದೆ. ಈ ಕವನಗಳಲ್ಲಿ ಹಲವು ನೀತಿ ಪಾಠಗಳಿದ್ದು, ತಾಳವಿಲ್ಲ, ಅಂತ್ಯಪ್ರಾಸ ನೀಡಲಾಗಿದೆ ಎಂದು ಹೇಳಿದರು. ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಲೇಖಕಿಯ ತಂದೆ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಂಬೀರಂಡ ಕಿಟ್ಟು ಕಾಳಪ್ಪ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಈ ಪುಸ್ತಕ ಆಪ್ತತೆಯನ್ನು ಮೂಡಿಸುತ್ತದೆ. ಕಾವ್ಯಾಸಕ್ತಿ ಬೆಳೆಸಿಕೊಂಡು ಭಾವನೆಗಳಿಗೆ ಅಕ್ಷರ ರೂಪ ನೀಡಿ ಕವನ ಸಂಕಲನ ಹೊರ ತಂದಿರುವುದು ಹೆಮ್ಮೆ ಎನಿಸಿದೆ. ಕೊಡವ ಮಕ್ಕಡ ಕೂಟ ಹಲವು ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಕೊಡವರ ಬಗ್ಗೆ ಉತ್ತಮ ಕಾಳಜಿ ವಹಿಸಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕಿಯ ತಾಯಿ ಕಂಬೀರಂಡ ಮುತ್ತಮ್ಮ ಹಾಗೂ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
*ಕೂಕ್ಲೂರ್ ಮಾಳೇಟಿರ ಸೀತಮ್ಮ ವಿವೇಕ್ ಪರಿಚಯ* ಮಾಳೇಟಿರ ಸೀತಮ್ಮ ವಿವೇಕ್ (ತಾಮನೆ ಕಂಬೀರಂಡ) ಹಾಸನದಲ್ಲಿ ನೆಲೆಸಿರುವ ಇವರು, ಮೂಲತಃ ಕೊಡಗಿನ ಬಾಡಗ ಗ್ರಾಮದ ಬೇತ್ರಿಯ ಕಂಬೀರಂಡ ಕಿಟ್ಟು ಕಾಳಪ್ಪ ಮತ್ತು ಮುತ್ತಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಪ್ರಥಮ ಪುತ್ರಿ.
ಬಾಲ್ಯದಲ್ಲಿ ಕ್ರೀಡಾ ವಲಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ವಿವಾಹದ ನಂತರ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯ ಸಂತ ಮೈಕಲರ ಶಾಲೆ ಹಾಗೂ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದು, ಟೆರೇಷಿಯನ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿರುವ ಸೀತಮ್ಮ, “ಸ್ಟಾರ್ ಆಫ್ ಮೈಸೂರು” ಬಿರುದನ್ನು ಪಡೆದುಕೊಂಡಿದ್ದಾರೆ. ಹಾಸನದ ಕೆ.ಪಿ.ಟಿ.ಸಿ.ಎಲ್.ನಲ್ಲಿ ಉದ್ಯೋಗದಲ್ಲಿರುವ ಮಾಳೇಟಿರ ವಿವೇಕ್ ಅವರನ್ನು ವಿವಾಹವಾಗಿರುವ ಇವರಿಗೆ ಒರ್ವ ಪುತ್ರ ಇದ್ದಾನೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಸೀತಮ್ಮ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದು, ಕೊಡಗಿನ ಜೈನ ಅರಸರ ಆಡಳಿತ, ಶ್ರವಣ ಬೆಳಗೊಳ ಪ್ರಾಕೃತ ವಿಶ್ವವಿದ್ಯಾಲಯದಿಂದ ಜೈನ ವಿದ್ವಾಂಸರ ಕೃತಿ-ಪುರಾಣ, ದತ್ತಿ ಶಾಸನ, ತಾಳೆಗರಿಯನ್ನೊಳಗೊಂಡು ವಿವಿಧ ವಿಷಯ ಮತ್ತು ಕ್ಷೇತ್ರಗಳಲ್ಲಿ ಅದ್ಯಯನ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕಿ ಮತ್ತು ಉಪನ್ಯಾಸಕಿಯಾಗಿಯೂ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿದ್ದಾರೆ. ಮಾಳೇಟಿರ ತಿಮ್ಮಯ್ಯ ಬರೆದ “who are we Kodavas” ಕೃತಿನ “ನಂಗ ದಾರ್ ಕೊಡವ” ಎಂದು ಕೊಡವ ಭಾಷೆಗೆ ತರ್ಜುಮೆ ಮಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ಕೊಡವ ಮಕ್ಕಡ ಕೂಟದಿಂದ ಇವರು ಬರೆದ “ಮನಸ್ಸು” ಮತ್ತು “ಭಾವ ಕುಸುಮ” ಎನ್ನುವ ಎರಡು ಕನ್ನಡ ಕೃತಿಗಳು ಬಿಡುಗಡೆಯಾಗಿದೆ. ಇವರು ಉದಯ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿ, ಹಾಸನ ಮಹಿಳಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೊಡವಾಮೆಗೆ ಸಂಬಂಧಿಸಿದ ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದಲ್ಲಿ ಜನಾಂಗಕ್ಕೆ ಸಂಬಂಧಪಟ್ಟ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ. “ಚೀತೆರ ಕಾಳ ಮುತ್ತ್ ಮಾಲೆ” ಇವರ ನಾಲ್ಕನೇ ಪುಸ್ತಕವಾಗಿದ್ದು, ವಿವಿಧ ವಿಷಯಗಳನ್ನು ಕ್ರೋಢೀಕರಿಸಿ ಕವನ ರೂಪದಲ್ಲಿ ಬರೆದಿದ್ದಾರೆ.












