ಮಡಿಕೇರಿ ಜೂ.28 NEWS DESK : ಜಿಲ್ಲಾ ಕೇಂದ್ರ ಮಡಿಕೇರಿಯ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕ್ಯಾಂಪಸ್‍ಗೆ, ಕೊಡಗಿನ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ಹಾಗೂ ಕಾಲೇಜು ಸ್ಥಾಪನೆಯ ಪ್ರಮುಖ ರೂವಾರಿಯೂ ಆಗಿದ್ದ ‘ಪಂದ್ಯಂಡ ಬೆಳ್ಳಿಯಪ್ಪ’ ಹೆಸರನ್ನು ಇಡಬೇಕೆಂದು ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1949ರಲ್ಲಿ ಆರಂಭಗೊಂಡ ಈಗಿನ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ವೀರ ಸೇನಾನಿಯ ಹೆಸರಿರುವುದಕ್ಕೆ ತಮ್ಮ ಯಾವುದೇ ಆಕ್ಷೇಪಗಳಿಲ್ಲ. ಬದಲಾಗಿ ಕಾಲೇಜು ಕ್ಯಾಂಪಸ್‍ಗೆ ಪಂದ್ಯಂಡ ಬೆಳ್ಳಿಯಪ್ಪ ಅವರ ಹೆಸರನ್ನಿಸಿರುವುದು ಹೆಚ್ಚು ಅರ್ಥಪೂರ್ಣವೆನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ ಅವರಿಗೂ ಮನವಿಯನ್ನು ಸಲ್ಲಿಸಿದ್ದು, ಅದಕ್ಕೆ ಅವರು ಪೂರಕ ಸ್ಪಂದನ ನೀಡಿರುವುದಾಗಿ ತಿಳಿಸಿದರು. ಸ್ವಾತಂತ್ರ್ಯ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪಂದ್ಯಂಡ ಬೆಳ್ಳಿಯಪ್ಪ ಅವರು, ಕೊಡಗಿನಲ್ಲಿ ಉನ್ನತ ಶಿಕ್ಷಣಕ್ಕೆ ಕಾಲೇಜಿನ ಕೊರತೆ ಇರುವುದನ್ನು ಮನಗಂಡು 1948ರಲ್ಲಿ ಅಂದಿನ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕವಿರಿಸಿಕೊಂಡು ನಡೆಸಿದ ಪ್ರಯತ್ನಗಳ ಫಲವಾಗಿ 1949ರಲ್ಲಿ ಇಂದಿನ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಸ್ಥಾಪನೆಯಾಯಿತು. ಹೀಗಿದ್ದೂ ಪ್ರಸ್ತುತ ಪಂದ್ಯಂಡ ಬೆಳ್ಳಿಯಪ್ಪ ಅವರ ಕೊಡುಗೆಗಳು ಜನಮಾನಸದಿಂದ ಮರೆಯಾಗಿರುವುದು ಅತ್ಯಂತ ಬೇಸರದ ವಿಚಾರ. ಜನೋಪಯೋಗಿ ಸಾಧಕರನ್ನು ಮರೆಯುವುದು ಎಂದರೆ ನಾವು ಅವರನ್ನು ಕೈಯಾರೆ ಕೊಂದಂತೆಯೆ ಎಂದು ಅಲ್ಲಾರಂಡ ವಿಠಲ ನಂಜಪ್ಪ ಅಭಿಪ್ರಾಯಿಸಿದರು. ಕೊಡಗಿನ ಅಭ್ಯುದಯಕ್ಕಾಗಿ, ಶಿಕ್ಷಣ ಕ್ಷೇತ್ರದ ಬೆಳವಣಿಗೆಗಾಗಿ ಪಂದ್ಯಂಡ ಬೆಳ್ಳಿಯಪ್ಪ ಅವರ ಸೇವೆಯನ್ನು ಪರಿಗಣಿಸಿ 1965ರಲ್ಲಿ ಪಂದ್ಯಂಡ ಬೆಳ್ಳಿಯಪ್ಪ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಜನರಲ್ ಕೆ.ಎಂ.ಕಾರ್ಯಪ್ಪ (ಬಳಿಕ ಅವರಿಗೆ ಫೀಲ್ಡ್ ಮಾರ್ಷಲ್ ಗೌರವವನ್ನು ಪ್ರದಾನ ಮಾಡಲಾಯಿತು)ಅವರು, ಪಂದ್ಯಂಡ ಬೆಳ್ಳಿಯಪ್ಪ ಅವರು ತಮ್ಮ ಸರ್ವಸ್ವವನ್ನು ನಾಡಿಗಾಗಿ ತ್ಯಾಗ ಮಾಡಿದವರು. ಕೊಡಗಿನ ಹಿತಕ್ಕಾಗಿ ಅವರು ತಳೆದಿದ್ದ ನಿಲುವು ಕೇಂದ್ರ ಹಾಗೂ ಮೇಲಿನವರ ಅಭಿಪ್ರಾಯಕ್ಕೆ ವಿರುದ್ಧವಿದ್ದುದರಿಂದ ಅವರ ಬೆಂಬಲ ಇವರಿಗೆ ದೊರೆಯದಾಯಿತು. ಪಂದ್ಯಂಡ ಬೆಳ್ಳಿಯಪ್ಪ ಅವರನ್ನು ತಪ್ಪಾಗಿ ತಿಳಿದು ಅವರಿಗೆ ಅನ್ಯಾಯ ಮಾಡಲಾಯಿತು. ಆದರೆ, ಅವರು ತಮ್ಮ ವಿಶ್ವಾಸ, ನಂಬಿಕೆಗಳನ್ನು ಅಧಿಕಾರ ಹಾಗೂ ಸಂಪತ್ತಿಗಾಗಿ ದೂರಿಕೊಳ್ಳುವವರಾಗಿರಲಿಲ್ಲ ಎಂದು ಅಂದಿನ ‘ಕೊಡಗು’ ಪತ್ರಿಕೆಯಲ್ಲಿ ದಾಖಲಾಗಿರುವುದನ್ನು ಅಲ್ಲಾರಂಡ ವಿಠಲ ಉಲ್ಲೇಖಿಸಿದರು. ಕೊಡಗಿಗೆ ಮಹಾತ್ಮಾ ಗಾಂಧಿ ಅವರನ್ನು ಬರುವಂತೆ ಮಾಡುವಲ್ಲಿಯೂ ಪಂದ್ಯಂಡ ಬೆಳ್ಳಿಯಪ್ಪ ಅವರ ಪರಿಶ್ರಮವಿತ್ತು ಎಂದು ತಿಳಿಸಿದ ಅಲ್ಲಾರಂಡ ವಿಠಲ ನಂಜಪ್ಪ, ಇಂತಹ ಮಹಾನ್ ಚೇತನ ಪಂದ್ಯಂಡ ಬೆಳ್ಳಿಯಪ್ಪ ಅವರ ಹೆಸರನ್ನು ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಕ್ಯಾಂಪಸ್‍ಗೆ ಇರಿಸಬೇಕು ಮತ್ತು ಅವರ ಪ್ರತಿಮೆಯನ್ನು ಕಾಲೇಜು ಆವರಣದಲ್ಲಿ ಸ್ಥಾಪಿಸಿ, ಅವರ ಮಾಹಿತಿಯನ್ನು ಯುವ ಸಮೂಹಕ್ಕೆ ತಲುಪಿಸುವ ಕಾರ್ಯವಾಗಬೇಕೆಂದು ತಿಳಿಸಿದರು.












