
ಮಡಿಕೇರಿ ಜು.2 NEWS DESK : ರೈತರು ಕೃಷಿ ಸಾಲದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸಹಕಾರ ಸಂಘಗಳು ಸಾಲ ನೀಡುವ ಸಂದರ್ಭ ಎರಡು ತಿಂಗಳುಗಳ ಒಳಗಾಗಿ ಪಹಣಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾಗಿ ರೈತರಿಂದ ಮುಚ್ಚಳಿಕೆ ಬರೆಸಿಕೊಳ್ಳುತ್ತಿವೆ. ಇದು ಬೀಸುವ ದೊಣ್ಣೆಯಿಂದ ತಪ್ಪಿಸುವ ಪ್ರಯತ್ನವಾಗಿದೆಯೇ ಹೊರತು ಇದರಿಂದ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ ಎಂದು ಮಾಲ್ದಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕೆಲವು ಸಂಘಟನೆಗಳು ಮಾಡಿರುವ ಆರೋಪದಂತೆ ಸಹಕಾರ ಸಂಘಗಳಿಂದ ರೈತರಿಗೆ ಸಾಲ ನೀಡುವ ಸಂದರ್ಭ ಅನ್ಯಾಯವಾಗುತ್ತಿಲ್ಲ. ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮುಚ್ಚಳಿಕೆ ಪಡೆದು ಸಾಲ ನೀಡಲಾಗುತ್ತಿದೆ. ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕೊಡಗಿನ ಸಹಕಾರ ಕ್ಷೇತ್ರದ ಕುರಿತು ಯಾರೂ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಬಾರದು ಎಂದರು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಕರ್ನಾಟಕ ಭೂಕಂದಾಯ ಕಾಯ್ದೆ 2013 ರಲ್ಲಿ ತಿದ್ದುಪಡಿಗೊಂಡು ರಾಷ್ಟ್ರಪತಿಯವರಿಂದ ಮಸೂದೆ ಅನುಮೋದನೆಗೊಂಡು ಜಾರಿಯಲ್ಲಿದ್ದರೂ ಕಂದಾಯ ಇಲಾಖೆ ಇದನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದ ಜಿಲ್ಲೆಯ ಭೂಹಿಡುವಳಿದಾರರು ವಿನಾಕಾರಣ ಕಿರುಕುಳ ಅನುಭವಿಸುತ್ತಿದ್ದಾರೆ. 2021ರಲ್ಲಿ ಸರ್ಕಾರ ಸುತ್ತೋಲೆಯೊಂದನ್ನು ನೀಡಿದ್ದು, ಜಿಲ್ಲೆ ಸೇರಿದಂತೆ ರಾಷ್ಟ್ರದಾದ್ಯಂತ ರೈತರು ಕೃಷಿ ಸಾಲ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು FRUITS ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ನೋಂದಣಿಗೆ ತಮ್ಮ ಸಂಬಂಧಿಸಿದ ಪಹಣಿ ಪತ್ರಗಳಲ್ಲಿ ಹಿಡುವಳಿದಾರನ ಹೆಸರು ಏಕವ್ಯಕ್ತಿಯದ್ದೇ ಆಗಿರಬೇಕಾಗಿರುತ್ತದೆ. ಕಂದಾಯ ಇಲಾಖೆಯ ವೈಫಲ್ಯದಿಂದ ರೈತರಿಗೆ ಇದು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ಇದುವರೆಗೆ ಜಿಲ್ಲೆಯಲ್ಲಿನ ಸಹಕಾರ ಕ್ಷೇತ್ರ ಆದಷ್ಟು ರೈತರಿಗೆ ಸಹಾಯವಾಗುವಂತೆ ಪ್ರಯತ್ನಿಸಿರುವುದು ಬಹತೇಕ ಜನರಿಗೆ ತಿಳಿದಿರುವ ವಿಚಾರವಾಗಿದೆ. ಈ ಸಾಲಿನಲ್ಲಿ ಸಾಲ ನೀಡುವ ಸಂದರ್ಭ FRUITS ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಹಾಗೂ ಈ ಬಗ್ಗೆ ಏಕವ್ಯಕ್ತಿಯ ಹೆಸರಿನಲ್ಲಿ ಪಹಣಿ ಪತ್ರ ಇರಬೇಕೆಂಬ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡ್ಡಾಯಗೊಳಿಸಿವೆ.
ಇದನ್ನು ಮನಗಂಡು ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೇಲೆ ಒತ್ತಡ ತಂದು ರೈತರು ಸೌಲಭ್ಯ ವಂಚಿತರಾಗಬಾರದೆಂಬ ದೃಷ್ಟಿಯಿಂದ ಎರಡು ತಿಂಗಳುಗಳ ಒಳಗಾಗಿ ತಮ್ಮ ಪಹಣಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾಗಿ ಮುಚ್ಚಳಿಕೆ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೆ ಕೃಷಿ ಸಾಲ ಪಡೆದುಕೊಳ್ಳಲು ನಮೂನೆ – 3 ರ ನೋಂದಣಿ ಮತ್ತು ಪ್ಲಾಂಟೇಶನ್ ಬೆಳೆಗಳಿಗೆ ಸರಳ ಅಡಮಾನ ಮಾಡಿಸಿಕೊಳ್ಳುವುದು ಕೂಡ ಕಡ್ಡಾಯವಾಗಿರುತ್ತದೆ. ಆದರೆ ಏಕವ್ಯಕ್ತಿಯ ಹೆಸರಿನಲ್ಲಿ ಪಹಣಿ ದಾಖಲೆ ಆಗದೇ ಈ ಸಮಸ್ಯೆ ಇನ್ನೂ ಕೂಡ ಮುಂದುವರೆಯುತ್ತಿದೆ. ಆದುದ್ದರಿಂದ ತಾತ್ಕಾಲಿಕವಾಗಿ ಮುಚ್ಚಳಿಕೆ ಬರೆಸಿಕೊಳ್ಳುವುದು ಅಗತ್ಯವಾಗಿದೆ. ನಮಗೆ ತಿಳಿದಂತೆ ಯಾವುದೇ ರೈತನಿಗೆ ಶೂನ್ಯ ಬಡ್ಡಿದರದ ಸಾಲ ನೀಡದೆ ಇರುವ ಪ್ರಕರಣಗಳು ಇಲ್ಲ. ಎಲ್ಲಾದರೂ ಇದ್ದಲ್ಲಿ ಸಂಬಂಧಿಸಿದ ರೈತರು ಅವಧಿಗೆ ಸರಿಯಾಗಿ ಸಾಲ ಮರುಪಾವತಿ ಮಾಡದೆ ಅಥವಾ ಒಬ್ಬನೆ ರೈತ ಒಂದಕ್ಕೂ ಹೆಚ್ಚು ಸಂಸ್ಥೆಗಳಿಂದ ಸಾಲ ಪಡೆದುಕೊಂಡಿರಬಹುದಾದ ಸಂದರ್ಭಗಳಲ್ಲಿ ಆಗಿರಬಹುದೇ ಹೊರತು ಬೇರೆ ಯಾವುದೇ ರೀತಿಯಲ್ಲಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿಲ್ಲ ಎಂದು ನಂದಾ ಸುಬ್ಬಯ್ಯ ಸ್ಪಷ್ಟಪಡಿಸಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಘಟನೆಗಳು ಸಂಪೂರ್ಣ ಮಾಹಿತಿಯನ್ನು ಹೊಂದದೆ ಶತಮಾನಕ್ಕೂ ಮೀರಿ ಇತಿಹಾಸ ಇರುವ ಕೊಡಗು ಜಿಲ್ಲೆಯ ಸಹಕಾರ ಚಳುವಳಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪವಾದ ಮಾಡುವುದು ಸರಿಯಲ್ಲ ಮತ್ತು ಇದನ್ನು ಮುಂದುವರಿಸಬಾರದು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಐನಂಡ ಲಾಲ ಅಯ್ಯಣ್ಣ ಉಪಸ್ಥಿತರಿದ್ದರು.









