
ಮಡಿಕೇರಿ ಜು.2 NEWS DESK : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್‍ನ ಕೊಡಗು ಘಟಕದ ವತಿಯಿಂದ ಜು.3ರಂದು ಕುಶಾಲನಗರದಲ್ಲಿ ‘ಸೌಹಾರ್ದ ನಡಿಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್(ಎಸ್‍ಎಸ್‍ಎಫ್)ನ ಕೊಡಗು ಪ್ರಧಾನ ಕಾರ್ಯದರ್ಶಿ ಜುನೈದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್‍ನಿಂದ ರಾಜ್ಯದ ಇಪ್ಪತ್ತು ಪ್ರಮುಖ ಪಟ್ಟಣಗಳಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, 18ನೇ ಕಾರ್ಯಕ್ರಮವಾಗಿ ಜು.3 ರಂದು ಸೌಹಾರ್ದ ನಡಿಗೆ ಕಾರ್ಯಕ್ರಮ ಕುಶಾಲನಗರದ ತಾವರೆ ಕೆರೆಯಿಂದ ಸಂಜೆ 4 ಗಂಟೆಗೆ ಆರಂಭಗೊಂಡು ಕಾರು ನಿಲ್ದಾಣದಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು. ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇತ್ತೀಚಿಗೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇದು ಮಿತಿಮೀರಿ ಹೋಗಿದ್ದು, ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶವನ್ನು ಸಾರುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ‘ಮನುಷ್ಯ ಮನಸ್ಸುಗಳನ್ನು ಪೋಣಿಸುವ’ ಎಂಬ ಘೋಷಣೆಯೊಂದಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇನ್ನಿತರ ಜಾತಿ ಧರ್ಮಗಳ ನಾಯಕರನ್ನು ಸೇರಿಸಿ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದು, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಜಿ ಭಾಗವಹಿಸಲಿದ್ದಾರೆ. ಕೊಡಗು ಜಂಇಯ್ಯತುಲ್ ಉಲಮಾ, ಮುಸ್ಲಿಂ ಜಮಾಅತ್, ಎಸ್‍ಜೆಎಂ, ಎಸ್‍ವೈಎಸ್, ಎಸ್‍ಎಸ್‍ಎಫ್ ನಾಯಕರು ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್‍ಎಸ್‍ಎಫ್ ಕೊಡಗು ಜಿಲ್ಲಾಧ್ಯಕ್ಷ ಕಮರುದ್ದೀನ್ ಅನ್ವಾರಿ ಸಖಾಫಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಹಾಗೂ ಕೋಶಾಧಿಕಾರಿ ನವಾಝ್ ಮದನಿ ಉಪಸ್ಥಿತರಿದ್ದರು.









