
ಮಡಿಕೇರಿ ಜು.2 NEWS DESK : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೃಹತ್ ಕೊಡುಗೆಯಾದ ‘ವಚನ’ಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಫ.ಗು.ಹಳಕಟ್ಟಿ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಉಪನ್ಯಾಸಕ ಮಾರುತಿ ದಾಸಣ್ಣವರ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ನಡೆದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಚನ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್ ಭಾಷೆಗೆ ವಚನಗಳ ಅನುವಾದ ಇವುಗಳಲ್ಲಿ ತೊಡಗಿಸಿಕೊಂಡು ವಚನಗಳನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟರು ಎಂದು ಮಾರುತಿ ದಾಸಣ್ಣವರ್ ವಿವರಿಸಿದರು. ವಚನ ಸಾಹಿತ್ಯ, ಅಂಕಣ ಬರಹಗಳು ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿ, ನಾಡಿಗೆ ನೀಡಿದ ಡಾ.ಫ.ಗು.ಹಳಕಟ್ಟಿ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು. ಶಿಕ್ಷಣ ನಂತರ ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಫ.ಗು.ಹಳಕಟ್ಟಿ ವಚನ ಸಾಹಿತ್ಯ ಸಂಗ್ರಹ ಹಾಗೂ ಮುದ್ರಣಕ್ಕಾಗಿಯೇ ವಕೀಲ ವೃತ್ತಿಯನ್ನು ಬಿಟ್ಟು ವಚನ ಸಂಗ್ರಹಕ್ಕೆ ಬದುಕು ಮೀಸಲಿಟ್ಟ ಧೀಮಂತ ಎಂದು ಅವರು ವರ್ಣಿಸಿದರು. ಅನೇಕ ಬಾರಿ ಸೈಕಲ್ ಏರಿ ಊರೂರು ಅಲೆಯುವುದು, ತಾಳೆ ಗರಿ, ಓಲೆಕಟ್ಟುಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣಕ್ಕೆ ಮುಂದಾದರು. ಇದರಿಂದ ಆರ್ಥಿಕ ತೊಂದರೆಗೂ ಸಿಲುಕಿದ್ದರು. ಆದರೂ ಯಾವುದನ್ನು ಲೆಕ್ಕಿಸದೆ ಜೀವನವನ್ನೇ ವಚನ ಸಾಹಿತ್ಯ ಸಂಗ್ರಹಕ್ಕೆ ಮೀಸಲಿಟ್ಟ ಅಪ್ರತಿಮ ಎಂದು ಮಾರುತಿ ದಾಸಣ್ಣವರ್ ನುಡಿದರು. ಫ.ಗು.ಹಳಕಟ್ಟಿ 20ನೇ ಶತಮಾನದಲ್ಲಿ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸಿದರು. ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾಸಂಸ್ಥೆ ಸ್ಥಾಪಿಸಿದರು. ಸ್ವಾತಂತ್ರ್ಯ ಆಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮಾರುತಿ ದಾಸಣ್ಣವರ್ ವಿವರಿಸಿದರು. ಕರ್ನಾಟಕ ಏಕೀಕರಣ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹಾಗೆಯೇ 1926 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ಸ್ಮರಿಸಿದರು. ವಚನ ಪಿತಾಮಹ, ಪಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು 1880 ರ ಜುಲೈ 2 ರಂದು ಜನಿಸಿದರು. 1964ರ ಜೂನ್, 29 ರಂದು ಲಿಂಗೈಕರಾದರು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, 1920ರ ಹೊತ್ತಿಗೆ ಒಂದು ಸಾವಿರ ವಚನಗಳ ಕಟ್ಟು ಸಂಗ್ರಹವಾಯಿತು. ಹೇಗಾದರೂ ಮಾಡಿ ಇದನ್ನು ಪ್ರಕಟಿಸಬೇಕೆಂದು 500 ರೂ.ಗಳೊಂದಿಗೆ ಆ ಹಸ್ತಪ್ರತಿಯನ್ನು ಮಂಗಳೂರಿನ ಬಾಶೆಲ್ ಮಿಶನ್ ಮುದ್ರಣಕ್ಕೆ ಕಳಿಸಿದರು. ಅದುವರೆಗೆ ಕವಿ ಚರಿತೆಕಾರರು ಕೇವಲ 50 ವಚನಕಾರರನ್ನು ಗುರುತಿಸಿದರು. ಫ.ಗು.ಹಳಕಟ್ಟಿಯವರು 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು. ಹಳಕಟ್ಟಿಯವರು 1925 ರಲ್ಲಿ ಇರುವ ಮನೆ ಮಾರಿ ‘ಹಿತ ಚಿಂತಕ ಮುದ್ರಣಾಲಯ’ ಎಂಬ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು ಎಂದು ತಿಳಿಸಿದರು. ಹಳಕಟ್ಟಿಯವರು ಪತ್ರಿಕೋದ್ಯಮದಲ್ಲೂ ಗಣನೀಯವಾದ ಸೇವೆ ಸಲ್ಲಿಸಿದರು. ಅವರು ಆರಂಭಿಸಿದ ‘ಶಿವಾನುಭವ’ ಎಂಬ ಮಾಸಿಕ ಪತ್ರಿಕೆ 35 ವರ್ಷಗಳವರೆಗೆ ನಡೆದದ್ದು ಅದರ ಹೆಗ್ಗಳಿಕೆ. ಅಷ್ಟು ಮಾತ್ರವಲ್ಲದೇ 1925 ರಲ್ಲಿ ‘ನವಕರ್ನಾಟಕ’ ಎಂಬ ವಾರ ಪತ್ರಿಕೆಯನ್ನು ಆರಂಭಿಸಿದರು. ಅವರು ಸಂಪಾದಿಸಿ ಪ್ರಕಟಿಸಿದ ವಚನ ಸಾಹಿತ್ಯ ಸಾರವಂತೂ ಅಪರೂಪ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದ ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟರು ಎಂದು ವಿವರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿ ಕಾಯಕ, ದಾಸೋಹ ಮತ್ತು ಮಹಾಮನೆಗಳಂತಹ ಅಪೂರ್ವವಾದ ಪರಿಕಲ್ಪನೆಗನ್ನು ಮನುಷ್ಯನ ಜೀವನದಲ್ಲಿ ತಂದು ಬದುಕನ್ನೇ ಒಂದು ತಪಸ್ಸಾಗಿಸಿದವರು. ಇಂತಹ ಅಪೂರ್ವ ನಿಧಿಯನ್ನು ನಮಗೆ ಹುಡುಕಿ ಮೊಗೆ ಮೊಗೆದು ಕೊಟ್ಟವರೇ ನಮ್ಮ ಫ.ಗು.ಹಳಕಟ್ಟಿ ಎಂದು ನುಡಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ವಚನ ಸಾಹಿತ್ಯದಿಂದ ನಾಡಿನ ಆಸ್ಮಿತೆ ತಿಳಿಯಲಿದೆ ಎಂದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.









