ಮಡಿಕೇರಿ NEWS DESK ಜು.5 : ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಸಿಂಗ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಸಭೆ ಬೆಂಗಳೂರಿನಲ್ಲಿ ನಡೆಯಿತು. ಪಕ್ಷದ ಕೊಡಗು ಜಿಲ್ಲಾ ಘಟಕದ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಬಲವರ್ಧನೆ ಕುರಿತು ಚರ್ಚಿಸಿದರು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅತಿಶಿ ಸಿಂಗ್ ಅವರು ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ನಡೆದಿರುವ ದುರಾಡಳಿತದಿಂದ ನಲುಗಿ ಹೋಗಿರುವ ಜನಸಾಮಾನ್ಯನಿಗೆ ಏಕೈಕ ಆಶಾಕಿರಣವಾಗಿ ಉಳಿದಿರುವ ಪಕ್ಷವೆಂದರೆ ಅದು ಆಮ್ ಆದ್ಮಿ ಪಾರ್ಟಿ ಒಂದೇ ಎಂದರು. ದೆಹಲಿಯಲ್ಲಿ ನಾವು ಕಳೆದ ಹತ್ತು ವರ್ಷಗಳಿಂದ ಮಾಡಿರುವ ಸಾಧನೆ ಹಾಗೂ ಪಂಜಾಬ್ ನಲ್ಲಿ ನೀಡುತ್ತಿರುವ ಸ್ವಚ್ಛ, ಪ್ರಾಮಾಣಿಕ ಆಡಳಿತ ವೈಖರಿಯನ್ನು ನೋಡಿದಾಗ ಜನಸಾಮಾನ್ಯರು ಅಧಿಕಾರಕ್ಕೆ ಬಂದಾಗ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯವಾಗುತ್ತದೆಯೇ ಹೊರತು ಪರಂಪರಾಗತ ಪಕ್ಷಗಳಿಂದ ಸಾಧ್ಯವಿಲ್ಲ ಎನ್ನುವುದು ಸಾಬೀತಾಗುತ್ತಿದೆ. ಜನಸಾಮಾನ್ಯ ಕೂಡ ಮುಖ್ಯಮಂತ್ರಿಯಾಗಬಹುದೆನ್ನುವುದಕ್ಕೆ ನಾನೇ ಉತ್ತಮ ಸಾಕ್ಷಿಯಾಗಿದ್ದೇನೆ. ಇದೇ ರೀತಿಯ ಪರ್ಯಾಯ ರಾಜಕಾರಣವನ್ನು ದೇಶದೆಲ್ಲೆಡೆ ಜನಸಾಮಾನ್ಯರು ಸ್ವಾಗತಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕರ್ನಾಟಕದಲ್ಲಿಯೂ ಆಮ್ ಆದ್ಮಿ ಪಾರ್ಟಿಗೆ ಉಜ್ವಲ ಭವಿಷ್ಯವಿದೆ. ಅಧಿಕಾರ ಇರಲಿ, ಬಿಡಲಿ ಕಾರ್ಯಕರ್ತರು ಹಗಲಿರುಳು ಜನಸಾಮಾನ್ಯನ ಏಳಿಗೆಗಾಗಿ ದುಡಿಯಬೇಕು. ಹಾಗಾದರೆ ಮಾತ್ರ ರಾಜಕೀಯ ಪರಿವರ್ತನೆ ಸಾಧ್ಯ ಎಂದು ಅತಿಶಿ ಸಿಂಗ್ ತಿಳಿಸಿದರು. ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ರಾಜ್ಯ ಕಾರ್ಯದರ್ಶಿ ಕೊಡಗಿನ ಭೋಜಣ್ಣ ಸೋಮಯ್ಯ ಅವರು ಅತಿಶಿ ಸಿಂಗ್ ಅವರನ್ನು ಭೇಟಿಯಾಗಿ ಪಕ್ಷದ ಬೆಳವಣಿಗೆಯ ಕುರಿತು ಚರ್ಚಿಸಿದರು.










