
ಸೋಮವಾರಪೇಟೆ ಜು.17 NEWS DESK : ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. 1988- 89ನೇ ಶೈಕ್ಷಣಿಕ ಸಾಲಿನಲ್ಲಿ ನಿಡ್ತ ಹಾಗೂ ಮುಳ್ಳೂರು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಒಟ್ಟುಗೂಡಿ ಶಾಲೆಗಳಿಗೆ ನೆರವು ನೀಡುತ್ತಿದ್ದು, ತಾವು ಓದಿದ ಸರ್ಕಾರಿ ಶಾಲೆಗಳಿಗೆ ಏನಾದರೊಂದು ಸಹಾಯ ಮಾಡುವ ಮೂಲಕ, ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂಬ ಉದ್ದೇಶದೊಂದಿಗೆ ಸಂಘವನ್ನು ಪ್ರಾರಂಭಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಜಯಕುಮಾರ್ ತಿಳಿಸಿದರು. ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಶೋಕ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಲೋಟಗಳನ್ನು ವಿತರಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಸಂಘದ ಕಾರ್ಯದರ್ಶಿ ಸುನಿಲ್, ಮುಳ್ಳೂರು ಶಾಲಾ ಆವರಣಕ್ಕೆ ಇಂಟರ್ ಲಾಕ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ನಿಡ್ತ ಸರ್ಕಾರಿ ಶಾಲೆಯ ಮೂವತೈದು ಹಾಗೂ ಮುಳ್ಳೂರು ಕಿರಿಯ ಪ್ರಾಥಮಿಕ ಶಾಲೆಯ ಮೂವತ್ತೆರೆಡು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಿದರು. ಸಂಘದ ಸದಸ್ಯರಾದ ಮುರುಗನ್, ರಾಮಕೃಷ್ಣ, ಆಶೋಕ್, ಮಲ್ಲೇಶ್, ರೇಖಾ, ಹೇಮಲತಾ, ಮಣಿ, ಮೋಹನಾಕ್ಷಿ, ಗಣೇಶ್, ಯೋಗೇಶ್, ಮಹೇಶ್ ಹಾಗು ಮುಖ್ಯ ಶಿಕ್ಷಕ ಸತೀಶ್ ಹಾಗು ಸಹ ಶಿಕ್ಷಕರು ಇದ್ದರು.








