ಮಡಿಕೇರಿ ಜು.9 NEWS DESK : ಮಡಿಕೇರಿ-ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗ ಮೈಸೂರಿಗೆ ಹಾಗೆಯೇ ಮೈಸೂರು-ವಿರಾಜಪೇಟೆ-ಕೆದಮುಳ್ಳೂರು-ಯಡಪಾಲ-ನಾಪೋಕ್ಲು-ಮಡಿಕೇರಿ ಮಾರ್ಗದ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಾಪೋಕ್ಲುವಿನಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರು, ಬೆಳಗ್ಗೆ 7 ಗಂಟೆಗೆ ಮಡಿಕೇರಿಯಿಂದ ಹೊರಟು ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗ ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಹೇಳಿದರು. ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು, ಈ ಹಿನ್ನೆಲೆ ಸಾರ್ವಜನಿಕರ ಬೇಡಿಕೆ ಈಡೇರಿದೆ ಎಂದು ಪೊನ್ನಣ್ಣ ತಿಳಿಸಿದರು. ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕ ಅಮರಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ ಜಯ ಶಾಂತಕುಮಾರ್, ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಎಂ.ಮೆಹಬೂಬ್ ಅಲಿ ಇತರರು ಇದ್ದರು. ಇದೇ ಸಂದರ್ಭ ಗ್ರಾ.ಪಂ.ವತಿಯಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಾಪೋಕ್ಲು ಗ್ರಾ.ಪಂ.ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷರಾದ ಶಶಿ ಮಂದಣ್ಣ, ಪಿಡಿಒ ಚೋಂದಕ್ಕಿ, ಸದಸ್ಯರು ಇತರರು ಇದ್ದರು.











