ಕುಶಾಲನಗರ ಜು.24 NEWS DESK : ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿಶ್ವ ವಿದ್ಯಾನಿಲಯದ ಹಿತರಕ್ಷಣಾ ಬಳಗದ ಸಂಯುಕ್ತಾಶ್ರಯದಲ್ಲಿ ವಿವಿ ಕಾವೇರಿ ಸಭಾಂಗಣದಲ್ಲಿ ಮಾಧ್ಯಮ ದಿನಾಚರಣೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಮಾಧ್ಯಮ ನಮ್ಮ ಜೀವನದಲ್ಲಿ ಒಂದು ಭಾಗವಾಗಿ ಹೋಗಿದೆ. ಮಾಧ್ಯಮಗಳಲ್ಲಿ ಯಾವುದೇ ವಿಚಾರ ಬಂದರೆ ಮಾತ್ರ ನಾವು ನಂಬುತ್ತೇವೆ. ಆದ್ದರಿಂದ ಸುದ್ದಿ ಕೊಡುವ ಭರದಲ್ಲಿ ಅಪೂರ್ಣ ಹಾಗೂ ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಅದರಿಂದ ಜನರ ಮೇಲಷ್ಟೇ ಅಲ್ಲದೇ ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಸತ್ಯತೆ ಅರಿತು ಪ್ರಕಟಿಸಿದಾಗ ಮಾತ್ರ ಸಮಾಜಕ್ಕೂ ಹಾಗೂ ಮಾಧ್ಯಮಗಳ ವಿಶ್ವಾಸರ್ಹತೆಗೂ ಅನುಕೂಲವಾಗಲಿದೆ ಎಂದರು. ಕೊಡಗು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಹೆ ಕಡಿಮೆಯಾಗುತ್ತಿದೆ.ಯುವಜನಾಂಗ ಅನ್ಲೈನ್ ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಅನ್ಲೈನ್, ಸಾಮಾಜಿಕ ಜಾಲತಾಣಗಳಿಂದ ಅರಾಜಕತೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಿಂದ ಹೊಸ ಪ್ರತಿಭೆ, ಹೊಸ ಚಿಂತನೆ ಹುಟ್ಟುತ್ತಿವೆ ಎಂಬುದರ ಜೊತೆಗೆ ಕ್ರೌರ್ಯ ದಂತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವುದು ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದರು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು. ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ,ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳು ಎಷ್ಟು ಪ್ರನುಖ್ಯತೆಯನ್ನು ಹೊಂದಿವೆಯೊ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪತ್ರಿಕಾರಂಗ ಹೊಂದಿದೆ ಎಂದರು. ಪತ್ರಿಕಾರಂಗವು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ವರದಿಗಳನ್ನು ಪ್ರಕಟಿಸುವ ಮೂಲಕ ಸಮಾಜದ ಸ್ವಾಸ್ಥ್ಯ ವನ್ನು ಎತ್ತಿ ಹಿಡಿಯಬೇಕು ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಸವಿತ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಸ್. ವಿ. ಮುರಳಿಧರ್, ಕೊಡಗು ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ.ಸುರೇಶ್, ಕೊಡಗು ವಿಶ್ವ ವಿದ್ಯಾನಿಲಯದ ಹಿತರಕ್ಷಣಾ ಬಳಗದ ಅಧಿಕೆ.ಎಸ್. ಕೃಷ್ಣಗೌಡ ಪಾಲ್ಗೊಂಡಿದ್ದರು. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಸ್ವಾಗತಿಸಿದರು. ಉಪನ್ಯಾಸಕ ಜಮೀರ್ ಅಹಮ್ಮದ್ ನಿರೂಪಿಸಿದರು.ಕೆ.ಎಸ್.ಮೂರ್ತಿ ವಂದಿಸಿದರು. ಇದೇ ಸಂದರ್ಭ ಪತ್ರಕರ್ತರು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.










