

ನಾಪೋಕ್ಲು ಜು.24 NEWS DESK : ಕೊಡಗು ದಕ್ಷಿಣ ಕನ್ನಡದ ಜಿಲ್ಲೆಗಳ ಗಡಿ ಭಾಗವಾದ ಚೆಂಬು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಂಬಂಧಪಟ್ಟ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೆಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ನಿರಂತರ ಗ್ರಾಮದ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟು ರೈತರು ಕಷ್ಟಪಟ್ಟು ಬೆಳೆಸಿದ ಕೃಷಿ ಗಿಡ ಹಾಗೂ ಬೆಳೆಗಳು ನಾಶವಾಗಿದೆ. ಚೆಂಬು ಗ್ರಾಮದ ಸುತ್ತ ಮುತ್ತಲಿನ ಊರುಗಳಾದ ಊರುಬೈಲು, ದಬ್ಬಡ್ಕ ಆನೆಹಳ್ಳ, ಕಾಂತುಬೈಲುಗಳಲ್ಲಿ ಹಲವು ದಿನಗಳಿಂದ ಆನೆಗಳು ಕೃಷಿ ಜಾಗಕ್ಕೆ ನುಗ್ಗಿ ಹಾನಿ ಮಾಡುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ಗ್ರಾಮದಲ್ಲಿ ಈ ರೀತಿ ಆನೆಗಳ ಹಾವಳಿ ಯಿಂದ ಕೃಷಿಕರು ಬಾರಿ ನಷ್ಟ ಅನುಭವಿಸುತ್ತಿದ್ದು, ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕಾಗಿದೆ. ಶಾಲಾ ಮಕ್ಕಳು ಹೋಗುವ ದಾರಿಯಲ್ಲಿ ಆನೆಗಳು ಕಂಡುಬರುತ್ತಿದ್ದು ಇದರಿಂದ ಅನಾಹುತ ನಡೆಯುವ ಸಂಭವ ಇದ್ದು ಬೇಗ ಆನೆಯನ್ನು ಕಾಡಿಗೆ ಓಡಿಸುವ ಸೂಕ್ತ ಕ್ರಮ ಅರಣ್ಯ ಇಲಾಖೆ ಕೈಗೊಂಡು ಕಾಡಾನೆಗಳು ಗ್ರಾಮಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು, ಕಾಡಾನೆ ದಾಳಿಯಿಂದ ನಷ್ಟ ಹೊಂದಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸವಂತೆ ಕ್ಷೇತ್ರದ ಶಾಸಕರಲ್ಲಿ ಚೆಂಬು ಗ್ರಾಮಸ್ಥರು ಮನವಿ ಮಾಡಿ ಒತ್ತಾಯಿಸಿದ್ದಾರೆ.
ವರದಿ :ದುಗ್ಗಳ ಸದಾನಂದ.










