
ಮಡಿಕೇರಿ ಆ.7 NEWS DESK : ವೈದ್ಯರು ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು. ಉಚಿತ ಚಿಕಿತ್ಸೆ ಇರುವುದರಿಂದ ಒತ್ತಡವೂ ಹೆಚ್ಚಿರುತ್ತದೆ. ವೈದ್ಯರು ಸಹನೆಯಿಂದ ಕೆಲಸ ಮಾಡಬೇಕು. ಯಾರ ಬಳಿಯೂ ಹಣ ಪಡೆಯಬಾರದು ಎಂದು ವೈದ್ಯರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.ಇಂದು ಮಳೆ ಕಾರಣದಿಂದ ಕೊಪ್ಪಳದ ಕಾರ್ಯಕ್ರಮಕ್ಕೆ ಹೋಗಿಲ್ಲ. ಆದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ವಾಣಿ ವಿಲಾಸ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಗೆ ಸಹ ಭೇಟಿ ನೀಡಿದ್ದು, ವಾಣಿ ವಿಳಾಸದಲ್ಲಿ ಒಂದು ದಿನಕ್ಕೆ 40 ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಬೇರೆ ಬೇರೆ ರಾಜ್ಯದ ಜನರು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಜನ ದಟ್ಟಣೆ ಹೆಚ್ಚಿರುವುದರಿಂದ ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚು ಮಾಡಬೇಕಿದೆ. ವೈದ್ಯರ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿಸಿದೆ. ಡಾಕ್ಟರ್ ಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಊಟ ಚೆನ್ನಾಗಿದೆ ಎಂದು ಹೇಳಿದರು. ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗಕ್ಕೆ ಭೇಟಿ ನೀಡಿದ್ದೇನೆ. ಅಂಗಾಂಗ ದಾನಕ್ಕೆ ಹೊರಗೆ 30 ರಿಂದ 40 ಲಕ್ಷ ವೆಚ್ಚವಾಗುತ್ತದೆ. ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ. 120 ಹಾಸಿಗೆಗಳ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ಹೆಚ್ಚಿಸುವ ಬಗ್ಗೆ ಬೇಡಿಕೆಯಿದೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಇದನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.









