ಮಡಿಕೇರಿ ಆ.13 NEWS DESK : ನ್ಯಾಯಾಲಯದ ಸೂಚನೆ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಮಡಿಕೇರಿ ನಗರದ ಅಂಚಿನಲ್ಲಿರುವ, ರಾಜ್ಯ ಸುರಕ್ಷಿತ ಸ್ಮಾರಕವಾದ ಗದ್ದುಗೆಯ ಒತ್ತುವರಿ ಜಾಗದಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ಶೀಘ್ರ ತೆರವುಗೊಳಿಸುವಂತೆ ಜಿಲ್ಲಾ ಲಿಂಗಾಯತ ಮತ್ತು ವೀರಶೈವ ಮಹಾಸಭಾದ ಪದಾಧಿಕಾರಿಗಳು ಹಾಗೂ ಗದ್ದುಗೆ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗದ್ದುಗೆ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು, ಕಳೆದ ಕೆಲವು ದಶಕಗಳಿಂದ ಗದ್ದುಗೆಯ 19.86 ಎಕರೆ ಜಾಗದ ಪೈಕಿ ಒತ್ತುವರಿಯಾಗಿರುವ 1.18 ಎಕರೆ ಜಾಗದಲ್ಲಿರುವ ಅನಧಿಕೃತ ಒತ್ತುವರಿಗಳನ್ನು ತೆರವು ಮಾಡುವಂತೆ ಆಗ್ರಹಿಸಿಕೊಂಡು ಬರಲಾಗುತ್ತಿದೆ. ಒತ್ತುವರಿ ತೆರವು ಕಾರ್ಯ ನಡೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಪುರಾತತ್ವ ಇಲಾಖೆಗೆ ಒಳಪಟ್ಟ ಸ್ಮಾರಕಗಳಿಗೆ ಸಂಬಂಧಿಸಿದ ಜಾಗವನ್ನು ಇತರರಿಗೆ ಪರಭಾರೆ ಮಾಡುವುದಾಗಲಿ, ನಿವೇಶನಗಳನ್ನಾಗಿ ನೀಡಲು ಬರುವುದಿಲ್ಲ. ಹೀಗಿದ್ದೂ ಗದ್ದುಗೆಗೆ ಸೇರಿದ ಜಾಗದಲ್ಲಿ ಮನೆಗಳು, ಶಾಲೆ, ಹೋಟೆಲ್, ಐಟಿಡಿಪಿ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಅನಧಿಕೃತ ಒತ್ತುವರಿಯನ್ನು ಸಕ್ರಮಗೊಳಿಸುವ ಮೇಲ್ಮನವಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲವೆಂದು ತಿಳಿಸಿದರು. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮದ ಅನ್ವಯ ಸರ್ಕಾರ ಕಳೆದ 2024ರ ನವೆಂಬರ್ 4 ರಂದು ಆದೇಶವೊಂದನ್ನು ಹೊರಡಿಸಿ, ಗದ್ದುಗೆಯ ಒತ್ತುವರಿ ಜಾಗದಲ್ಲಿರುವ ವಾಸದ ಮನೆಗಳು, ಶಾಲೆ, ಹೋಟೆಲ್, ವಸತಿ ನಿಲಯದ ಕಟ್ಟಡಗಳನ್ನು 15 ದಿನಗಳ ಒಳಗೆ ತೆರವುಗೊಳಸುವಂತೆ ಆದೇಶಿಸಿದೆ. ಆದರೆ, ಈ ಆದೇಶ ಬಂದು ಸುಮಾರು ಒಂಭತ್ತು ತಿಂಗಳು ಕಳೆದರು ಒತ್ತುವರಿ ತೆರವು ಪ್ರಕಿಯೆ ನಡೆಸಿಲ್ಲವೆಂದು ಆರೋಪಿಸಿದರು. ಪುರಾತತ್ವ ಇಲಾಖೆಗೆ ಒಳಪಟ್ಟ ಸ್ಮಾರಕಕ್ಕೆ ಸೇರಿದ ಜಾಗದ ಒತ್ತುವರಿಯನ್ನು ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. *ಪರ್ಯಾಯ ವ್ಯವಸ್ಥೆ* ಗದ್ದುಗೆಯ ಜಾಗದಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಸಿದಲ್ಲಿ, ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳಿಗೆ ಮನೆ, ನಿವೇಶನಗಳನ್ನು ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರವಿ ಕುಶಾಲಪ್ಪ ತಿಳಿಸಿದರು. *ಗಾಜಿನ ಸೇತುವೆಗೆ ವಿರೋಧ* ಪ್ರಸಿದ್ಧ ಪ್ರವಾಸಿತಾಣ ‘ರಾಜಾ ಸೀಟು’ವಿನಲ್ಲಿ ಅವೈಜ್ಞಾನಿಕವಾದ ‘ಗ್ಲಾಸ್ ಬ್ರಿಡ್ಜ್’ ನಿರ್ಮಿಸುವುದಕ್ಕೆ ಯಾವುದೇ ಕಾರಣಕ್ಕು ಅವಕಾಶ ನೀಡುವುದಿಲ್ಲ. ಜನ ವಿರೋಧದ ನಡುವೆಯೂ ಯೋಜನೆಯ ಜಾರಿಗೆ ಮುಂದಾದಲ್ಲಿ ‘ರಾಜಾಸೀಟು ಉಳಿಸಿ ಆಂದೋಲನ’ಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಈ ನಾಡಿನ ಸುಂದರ ಪರಿಸರ, ವಿಶಿಷ್ಟ ಸಂಸ್ಕೃತಿ, ಪರಂಪರೆಗಳನ್ನು ಬದಿಗೆ ಸರಿಸಿ, ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕೇವಲ ಪ್ರವಾಸೋದ್ಯಮದ ಅಭಿವೃದ್ಧಿಯ ನೆಪದಲ್ಲಿ ಇಂತಹ ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೆ ಭಾಗಮಂಡಲ ರಸ್ತೆಯಲ್ಲಿ, ಅಬ್ಬಿಫಾಲ್ಸ್ ರಸ್ತೆಯಲ್ಲಿ ಗ್ಲಾಸ್ ಬ್ರಿಡ್ಜ್‍ಗಳ ನಿರ್ಮಾಣವಾಗಿ ಪ್ರಸ್ತುತ ಸ್ಥಗಿತವಾಗಿದೆ. ಇವುಗಳು ಇರುವ ಪ್ರದೇಶಗಳಲ್ಲಿ ಪ್ರವಾಸಿಗರ ವಾಹನಗಳ ದಟ್ಟಣೆಯಿಂದ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜಾಸೀಟಿನಲ್ಲಿರುವ ಸ್ಮಾರಕ ಪ್ರಾಚ್ಯ ವಸ್ತು ಇಲಾಖೆಗೆ ಒಳಪಡುತ್ತದೆ. ಇಂತಹ ಯಾವುದೇ ಸ್ಮಾರಕದ ಸುತ್ತಮುತ್ತಲ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳಿಗೆ ಅವಕಾಶವಿಲ್ಲ. ರಾಜಾಸೀಟು, ಕೋಟೆ, ಗದ್ದುಗೆಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಅಗತ್ಯದೆ ಎಂದು ಹೇಳಿದರು. ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಸಂದರ್ಭ, ಇದರ ಅಧ್ಯಯನಕ್ಕೆ ಬಂದಿದ್ದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ ಮಡಿಕೇರಿ, ಗಾಳಿಬೀಡು, ಗರ್ವಾಲೆ, ಮಾದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೃಹತ್ ನಿರ್ಮಾಣ ಕಾಮಗಾರಿಗಳು ನಡೆಯಕೂಡದೆಂದು ತಿಳಿಸಿದೆ. ಆದ್ದರಿಂದ ರಾಜಾಸೀಟ್ ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಬಾರದೆಂದು ರವಿ ಕುಶಾಲಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವೀರಶೈವ, ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಾಂಭ ಶಿವಯ್ಯ, ಖಜಾಂಚಿ ಹೆಚ್.ಬಿ.ಉದಯ ಕುಮಾರ್, ಮುಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಹಾಗೂ ಜಿ.ಪಂ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ ಉಪಸ್ಥಿತರಿದ್ದರು.










