ಗೋಣಿಕೊಪ್ಪ ಆ.13 NEWS DESK : ಗೌರಿ ಗಣೇಶ ಹಬ್ಬದ ಸಂಭ್ರಮವಾಗಿ ಗಿಡುಗ ಸಿನಿಮಾ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆಂಪೇಗೌಡ ಮಾಗಡಿ ತಿಳಿಸಿದ್ದಾರೆ. ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಿಡುಗ ಸಿನಿಮಾ ಅಣ್ಣ ತಂಗಿಯ ಬಾಂಧವ್ಯದ ಬೆಸುಗೆಯ ಕೌಟುಂಬಿಕ ಕಥೆಯನ್ನು ಹೊಂದಿರುವ ಸಿನಿಮವಾಗಿದೆ. ಸಿನಿಮಾದಲ್ಲಿ ಒಂದು ಕೊಲೆಯ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿ ತ್ರಿಲ್ಲಿಂಗ್ ನೀಡಲಾಗಿದೆ. ಸಿನಿಮಾದಲ್ಲಿರುವ ಮೂರು ಅತ್ಯುತ್ತಮ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಸಿನಿಮಾ ನಡೆಯಲಿದ್ದು, 40 ದಿನಗಳಲ್ಲಿ ಬೆಂಗಳೂರು, ಮಾಗಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು 30ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಪಾತ್ರದಾರಿಗಳಾಗಿ ಸಿನಿಮಾಕ್ಕೆ ಜೀವ ತುಂಬಿದ್ದಾರೆ ಎಂದರು. ಸಿನಿಮಾ ಪ್ರೇಕ್ಷಕರನ್ನು ಸಂಪೂರ್ಣವಾಗಿ ಮನತಣಿಸಲು ಈ ತಂಡ ತಮ್ಮ ಕಲಾ ಕೌಶಲ್ಯವನ್ನು ದಾರೆ ಎರೆದಿದೆ ಎಂದರು. ಸಿನಿಮಾದ ನಾಯಕ ನಟನಾಗಿ ಕೊಡಗಿನ ನಿವಾಸಿ ರತೀಶ್ ಹುದಿಕೇರಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಭವಾನಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜ ರಾಣಿ ರೂರಲ್ ರಾಕೆಟ್, ಅವಂತಿಕಾ ಮತ್ತು ಇನ್ನಿತರ ಸಿನಿಮಾಗಳನ್ನು ನಿರ್ದೇಶನ ಮಾಡಿದ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಅನುಭವ ಹೊಂದಿರುವ ಮಾಗಡಿ ಕೆಂಪೇಗೌಡ ಅವರು, ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶಂಕರ್ ನಾರಾಯಣ, ನಂಬೋದಿರಿ, ಕೆಂಪೇಗೌಡ ಜಿ, ರತೀಶ್ ಹುದಿಕೇರಿ, ಬಂಡವಾಳ ಹೂಡಿದ್ದಾರೆ. ಸಂಗೀತ ವಿನ್ಸನ್ ಮತ್ತು ಮುಖೇಶ್, ಸಂಕಲನ ಆದಿ ಆದರ್ಶ, ಸಾಹಸ ಸುಪ್ರೀತ್ ಸುಬ್ಬು ನಿರ್ವಹಿಸಿದ್ದು ,ಶ್ರೀ ಸಿನಿಮಾ ಮೂಲಕ ಪ್ರೊಡಕ್ಷನ್ ಮಾಡಲಾಗಿದೆ. ಗಿಡುಗ ಸಿನಿಮಾವನ್ನು ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡಬಹುದಾದ ಚಿತ್ರವಾಗಿದೆ ಎಂದು ಹೇಳಿದರು. ಆಗಸ್ಟ್ ತಿಂಗಳಲ್ಲಿ ಗೋಣಿಕೊಪ್ಪದ ನೂತನ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಾಯಕ ನಟ ರತೀಶ್ ಹುದಿಕೇರಿ, ನಾಯಕಿ ಭವಾನಿ ಉಪಸ್ಥಿತರಿದ್ದರು.










