
ಕೂಡುಮಂಗಳೂರು ಆ.15 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಎನ್.ಎಸ್.ಎಸ್., ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿ ಎಂ ಸಿ ಸಹಯೋಗದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಕೆ.ಹರೀಶ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯದ ಇತಿಹಾಸ ಹಾಗೂ ಸ್ವಾತಂತ್ರ್ಯ ವೀರರ ಹೋರಾಟ, ಅವರ ತ್ಯಾಗ, ಬಲಿದಾನ, ಅವರ ಹೋರಾಟ ಹಾಗೂ ಸೇವೆಯನ್ನು ಸ್ಮರಿಸುವುದರೊಂದಿಗೆ ಅವರ ಆದರ್ಶಗಳನ್ನು ಪರಿಪಾಲಿಸುವ ಮೂಲಕ ದೇಶದ ಐಕ್ಯತೆಯನ್ನು ಸಾರಬೇಕು ಎಂದರು. ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಸದಾ ಎತ್ತರದಲ್ಲಿ ಹಾರುವಂತೆ ಮಾಡೋಣ. ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟೋಣ. ಸದೃಢ ದೇಶದ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದರು. ಪ್ರವಾಸೋದ್ಯಮಿಯೂ ಶಿಕ್ಷಕರ ಸಂಘಟನೆಯ ಮುಖಂಡರೂ ಆದ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ದೇಶ ಸದೃಢವಾಗಿದ್ದರೆ ನಮ್ಮ ಬದುಕೂ ಸದೃಢವಾಗುತ್ತದೆ.
ದೇಶದ ಪ್ರಗತಿಗೆ ನಾವು ಸದಾ ಕೊಡುಗೆ ನೀಡಬೇಕಿದೆ.ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಗಡಿಯನ್ನು ರಕ್ಷಣೆ ಮಾಡುವ ಎಲ್ಲಾ ವೀರ ಯೋಧರಿಗೆ ನಮನ ಸಲ್ಲಿಸೋಣ. ಯೋಧರು ನಮ್ಮ ಆಸ್ತಿ ಎಂದು ಬಣ್ಣಿಸಿದರು. ಇದು ಸ್ವಾತಂತ್ರ್ಯ ವೀರರನ್ನು ಗೌರವಿಸುವ, ಹೋರಾಟಗಾರರ ತ್ಯಾಗವನ್ನು ಸ್ಮರಿಸುವ, ದೇಶ ರಕ್ಷಣೆಗೆ ಕಟಿಬದ್ಧರಾಗಿರುವ ಪ್ರತಿಜ್ಞೆ ತೊಡುವ ಕ್ಷಣವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸ್ವಾತಂತ್ರ್ಯ ಗಳಿಸಲು ಶ್ರಮಿಸಿದ ನಮ್ಮ ವೀರರ ಧೈರ್ಯ, ತ್ಯಾಗಗಳನ್ನು ಸ್ಮರಿಸೋಣ, ಗೌರವಿಸೋಣ. ರಾಷ್ಟ್ರದ ಐಕ್ಯತೆ, ಸಮಗ್ರತೆಗೆ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ದೇಶದ ಹಿರಿಮೆ- ಗರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯೋಣ ಎಂದರು. ಸ್ವಾತಂತ್ರ್ಯಗಾರರ ಹೋರಾಟ ಮತ್ತು ತ್ಯಾಗ, ಬಲಿದಾನದ ಕುರಿತು ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿದರು. ಇದೇ ವೇಳೆ ಸೇನೆಯಲ್ಲಿ ನಿವೃತ್ತಗೊಂಡಿರುವ ನಿವೃತ್ತ ಯೋಧ ಬಿ.ಎಲ್.ವಿನೋದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯ ಕೆ.ಕೆ.ಭೋಗಪ್ಪ, ಮಂಡಲ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಸ್.ರಾಜಾಚಾರಿ, ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಎಸ್.ಎಂ.ಗೀತಾ ಕೆ.ಟಿ.ಸೌಮ್ಯ, ಬಿ.ಎಸ್.ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಹಾಜರಿದ್ದರು. :: ಸಾಂಸ್ಕೃತಿಕ ವೈಭವ :: ನಂತರ ನಡೆದ ಸಾಂಸ್ಕೃತಿಕ ವೈಭವ* ಕಾರ್ಯಕ್ರಮದಲ್ಲಿ ವಿವಿಧ ವೇಷ ವನ ಧರಿಸಿದ್ದ
ಶಾಲಾ ಮಕ್ಕಳು ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿ ರಾಷ್ಟ್ರೀಯ ಭಾವೈಕ್ಯತೆ ಪ್ರದರ್ಶಿಸಿದ್ದು ಗಮನ ಸೆಳೆಯಿತು.










