
ಮಡಿಕೇರಿ NEWS DESK ಆ.19 : ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದ ನೀರಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಹಣಕೋಡು ಗ್ರಾಮದ ಚಿದಾನಂದ (27) ಎಂಬುವವರೇ ಮೃತ ವ್ಯಕ್ತಿ. ಭಾನುವಾರ ರಾತ್ರಿ ಚಿದಾನಂದ ತಾನು ಕೆಲಸ ಮಾಡುತ್ತಿದ್ದ ವಿದ್ಯುತ್ ಉತ್ಪಾದನಾ ಘಟಕದಲ್ಲಿಯೇ ನೀರಿಗೆ ಬಿದ್ದಿದ್ದರು ಎಂದು ಹೇಳಲಾಗಿದೆ. ಸೋಮವಾರ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಜಲಾಶಯದಲ್ಲಿ ಹುಡುಕಾಟ ನಡೆಸಿದರೂ ಸುಳಿವು ದೊರೆತ್ತಿರಲಿಲ್ಲ. ಮಂಗಳವಾರ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಮರದ ಬುಡಕ್ಕೆ ಮೃತದೇಹ ಸಿಲುಕಿಕೊಂಡಿರುವುದು ಗೋಚರಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.








