
ಮಡಿಕೇರಿ ಆ.22 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಪ್ರತಿಭೆಯನ್ನು ಗುರುತಿಸಲು ಕ್ರೀಡಾಕೂಟ ಸಹಕಾರಿಯಾಗಿದೆ. ದಸರಾ ಕ್ರೀಡಾಕೂಟದ ಮೂಲಕ ವಿವಿಧ ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ. ದಸರಾ ಕ್ರೀಡೆಯು ರಾಜಮನೆತನದ ದಸರಾ ಹಬ್ಬ ಆಚರಣೆ ಸಂದರ್ಭದಿಂದಲೇ ನಡೆದುಕೊಂಡು ಬಂದ ಹಿನ್ನೆಲೆಯಲ್ಲಿ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಚಕ್ರವರ್ತಿ, ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ಮುರುಳಿ, ಕ್ರೀಡಾ ತರಬೇತಿದಾರರಾದ ವೆಂಕಟೇಶ, ದೀನಾಮಣಿ, ಬಿಂದಿಯಾ, ಸುಬ್ಬಯ್ಯ, ಗಣೇಶ್, ಮಂಜುನಾಥ, ಮಹಾಬಲ, ನಿವೃತ್ತ ಅರ್ಥೆಟಿಕ್ಸ್ ತರಬೇತಿದಾರ ಅಂತೋಣಿ ಡಿಸೋಜ, ಸಹಾಯಕ ಠಾಣಾಧಿಕಾರಿ ವಿಜಯ, ರಾಜ್ಯ ಮಟ್ಟದ ಕ್ರೀಡಾಕೂಟ ಪಟು ಸೋಮಶೇಖರ್, ಸೇರಿದಂತೆ ತಾಲ್ಲೂಕು ಮಟ್ಟದ ಯುವಕರ, ಯುವತಿಯರು ಭಾಗವಹಿಸಿದರು. ಕ್ರೀಡಾಕೂಟದಲ್ಲಿ ಪುರುಷರ ಗುಂಪು ಆಟ, ವಾಲಿಬಾಲ್, ಕಬ್ಬಡಿ, ಅಥ್ಲೆಟಿಕ್ ವಿಭಾಗದ ಆಟಗಳು, ಮಹಿಳೆಯರ ವಿಭಾಗದ ಕ್ರೀಡಾಕೂಟಗಳು ನಡೆದವು.








