
ಕುಶಾಲನಗರ ಆ.23 NEWS DESK : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ತಾವು ಪಡೆದ ಶಿಕ್ಷಣಕ್ಕೆ ಮಹತ್ವ ಸಿಗುತ್ತದೆ ಎಂದು ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಪಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಬೈಚನಹಳ್ಳಿಯಲ್ಲಿರುವ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವುದಕ್ಕೆ ಫ್ರೆಶರ್ಸ್ ಡೇ ಸಹಕಾರಿಯಾಗಿದೆ. ತಮ್ಮ ಪ್ರತಿಭೆಯನ್ನು ಅನಾವರಣ ಪಡಿಸಲು ವೇದಿಕೆ ನೀಡುವುದು ಮತ್ತು ಹಿರಿಯರೊಂದಿಗೆ ಬಾಂಧವ್ಯ ಬೆಳೆಸುವುದು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು. ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಎಂಬುದು ಕೇವಲ ಉದ್ಯೋಗ ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಜ್ಞಾನಾರ್ಜನೆ ಶಿಕ್ಷಣದ ಮುಖ್ಯ ಉದ್ದೇಶವಾಗಿರಬೇಕು.ತಾವು ಪಡೆದುಕೊಂಡ ಶಿಕ್ಷಣ ಸದ್ಬಳಕೆ ಮಾಡಿಕೊಂಡು ಸ್ವ ಉದ್ಯೋಗ ಪಡೆದುಕೊಳ್ಳಲು ಚಿಂತನೆ ಹರಿಸಬೇಕಿದೆ. ನಾವು ಕಲಿತ ಶಿಕ್ಷಣವನ್ನು ಸತ್ಕಾರ್ಯ, ಒಳ್ಳೆಯ ವಿಚಾರಗಳಿಗೆ ಉಪಯೋಗಿಸಬೇಕಿದೆ ಎಂದರು. ವಿದ್ಯಾರ್ಥಿಗಳು ತಪ್ಪು ಹಾದಿ ಹಿಡಿಯದೆ, ಸಮಾಜದಲ್ಲಿ ಇತರರಿಗೆ ಮಾದರಿಯಾಗುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತಾ,ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಪದಗ್ರಹಣ ನೆರವೇರಿಸಿದರು. ವಿವೇಕಾನಂದರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಬಿ.ಎಸ್.ಕ್ಲಾರಾ ರೇಷ್ಮಾ , ಆಡಳಿತಾಧಿಕಾರಿ ಮಹೇಶ್ ಅಮಿನ್, ಪ್ರಮುಖರಾದ ನಂಜಪ್ಪ ಸೇರಿದಂತೆ ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.ಇದೇ ಸಂದರ್ಭ ವಿದ್ಯಾರ್ಥಿಗಳು ಕಾನೂನಿಗೆ ಸಂಬಂಧಿಸಿದ ಸಂಶಯಗಳನ್ನು ಡಿವೈಎಸ್ಪಿ ಅವರ ಬಳಿ ಪ್ರಶ್ನಿಸಿ ಉತ್ತರ ಪಡೆದುಕೊಂಡರು.ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.









