
ಮಡಿಕೇರಿ ಆ.23 NEWS DESK : ಅರಣ್ಯ ಬಗರ್ ಹುಕುಂ ಸಾಗುವಾಳಿದಾರ ಬಡ ಕುಟುಂಬಗಳಿಗೆ ಸರಕಾರ ಒನ್ ಟೈಮ್ ಸೆಟಲ್‍ಮೆಂಟ್ ಮೂಲಕ ಭೂಮಿ, ವಸತಿ ಹಕ್ಕು ಮಾನ್ಯ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖ ಅಮೀನ್ ಮೊಹಿಸಿನ್ ಅವರು ಸಿ ಮತ್ತು ಡಿ ಭೂಮಿಯ ಸಮಸ್ಯೆಗೆ ದೊರೆಯುವ ಪರಿಹಾರ ಬಡವರ ಪರವಾಗಿ ಇರಬೇಕೇ ಹೊರತು ಉಳ್ಳವರ ಪರವಾಗಿ ಇರಬಾರದು. ಬಡವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು. ಅಕ್ರಮ ಸಕ್ರಮ ಸಮಿತಿ ಕೇವಲ ನಾಮಕಾವಸ್ಥೆಗಷ್ಟೇ ಇದ್ದು, ಇದೊಂದು ರಾಜಕೀಯ ಸಮಿತಿಯಾಗಿದೆ. ಈ ಸಮಿತಿಯಡಿ ಎಷ್ಟು ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಲೆಕ್ಕವನ್ನು ಮೊದಲು ನೀಡಬೇಕು. ತಹಶೀಲ್ದಾರರು ಸಮಿತಿಯ ಸಭೆ ನಡೆಸಿ ನಿವೇಶನ ರಹಿತರ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದರು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ‘ಉಳುವವನೇ ಭೂ ಒಡೆಯ ನೀತಿ’ಯನ್ನು ಜಾರಿ ಮಾಡಿದಂತೆ ಈಗಿನ ಸರಕಾರ ಕೂಡ ಸಾಗುವಾಳಿ ಮಾಡುತ್ತಿರುವ ಭೂರಹಿತ ಬಡವರಿಗೆ ಭೂ ಮಂಜೂರಾತಿ ಮಾಡಲು ಒನ್ ಟೈಮ್ ಸೆಟಲ್‍ಮೆಂಟ್ ವ್ಯವಸ್ಥೆಯನ್ನು ಜಾರಿ ಮಾಡಬೇಕು. ನಿವೇಶನ ರಹಿತರ ಅರ್ಜಿಯನ್ನು ಸರಕಾರ ಶೀಘ್ರ ಪುರಸ್ಕರಿಸದಿದ್ದಲ್ಲಿ ಸಮಿತಿ ವತಿಯಿಂದ ರಾಜ್ಯವ್ಯಾಪಿ ತೀವ್ರ ರೀತಿಯ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಫಾರಂ ನಂಬರ್ 50, 53, 57, 94ಸಿ ಗಳಲ್ಲಿ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಬಡವರ ಅರ್ಜಿಗಳನ್ನು ಉಳ್ಳವರ ಪ್ರಭಾದಿಂದ ತಿರಸ್ಕರಿಸಲಾಗಿದೆ. ಆದಿವಾಸಿಗಳು, ಪರಿಶಿಷ್ಟರು ಹಾಗೂ ಬಡವರಿಗೆ ಹಂಚಿಕೆ ಮಾಡಲು ಭೂಮಿ ಇಲ್ಲ ಎಂದು ಹೇಳುವ ಸರಕಾರ ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ 25 ಎಕರೆ ವರೆಗೆ ಭೂಮಿಯನ್ನು ನೀಡಲು ಮುಂದಾಗಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿರಾಜಪೇಟೆ ಕ್ಷೇತ್ರದ ಶಾಸಕರು ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಂಡಿದ್ದಾರೆ. ಇದು ನಮ್ಮ ಹೋರಾಟ ಸಮಿತಿಯ ಹೋರಾಟದ ಪ್ರತಿಫಲ ಎಂದು ಅಮೀನ್ ಮೊಹಿಸಿನ್ ತಿಳಿಸಿದರು. ಸಮಿತಿಯ ಮತ್ತೊಬ್ಬ ಪ್ರಮುಖ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಉಳುವವನೇ ಭೂಒಡೆಯ ಎಂದು ಕಾನೂನು ಜಾರಿ ಮಾಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಸರಕಾರ ಬಡವರ ಪರವಾಗಿರುವ ಅರಸು ಅವರ ಆದರ್ಶನಗಳನ್ನು ಯಾಕೆ ಪಾಲಿಸುತ್ತಿಲ್ಲವೆಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳು ಅರಸು ಅವರ ಯೋಜನೆಯನ್ನು ಮುಂದುವರೆಸುವಲ್ಲಿ ವಿಫಲವಾಗಿವೆ. ಬೆವರು ಸುರಿಸಿ ದುಡಿಯುವ ಬಡವನಿಗೆ ಇಂದು ಭೂಮಿ ಮತ್ತು ಸೂರು ಇಲ್ಲದಾಗಿದೆ. ಸರಕಾರಿ ಭೂಮಿ, ರಿಯಲ್ ಎಸ್ಟೇಟ್, ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉಳ್ಳವರ ಪಾಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಗಳು ಬಡವರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಏಕರೆ ಪೈಸಾರಿ ಜಾಗವನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಸರಕಾರದ ಯೋಜನೆಯಡಿ ಜಿಲ್ಲೆಯಲ್ಲಿ 30 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಬಡವರಿಗೆ ನೀಡಲು ಇಲ್ಲದ ಭೂಮಿ ಉಳ್ಳವರಿಗೆ ಹಂಚಿಕೆ ಮಾಡಲು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಇಂದಿಗೂ ಜಿಲ್ಲೆಯಲ್ಲಿ ಬಡವರಿಗೆ ಪ್ಲಾಸ್ಟಿಕ್ ಶೀಟ್ ಗಳನ್ನು ವಿತರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ, ಸೂರು ಕಲ್ಪಿಸುವ ವ್ಯವಸ್ಥೆ ಇನ್ನೂ ಕೂಡ ಅನುಷ್ಠಾನಗೊಂಡಿಲ್ಲ್ಲ. ವಿರಾಜಪೇಟೆ ಕ್ಷೇತ್ರದ ಶಾಸಕರು ಬಡವರಿಗೆ ನಿವೇಶನ ನೀಡುವ ಕುರಿತು ಆಸಕ್ತಿ ತೋರಿದ್ದಾರೆ. ಆದರೆ ಮಡಿಕೇರಿ ಶಾಸಕರು ಬಡವರ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ಕೊಡಗಿನಲ್ಲಿ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತಕ್ಷಣ ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೇಶನ ರಹಿತ ಬಡವರಿಗೆ ಭೂಮಿ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಹೋರಾಟವನ್ನು ರೂಪಿಸುವುದಾಗಿ ಡಿ.ಎಸ್.ನಿರ್ವಾಣಪ್ಪ ಎಚ್ಚರಿಕೆ ನೀಡಿದರು. ಸಮಿತಿಯ ಪ್ರಮುಖ ಕೆ.ಮೊಣ್ಣಪ್ಪ ಮಾತನಾಡಿ ಸರಕಾರ ಶ್ರೀಮಂತರ ಪರವಾಗಿದೆ, ಬಡವರು ಜಾಗ ಕೇಳಿದರೆ ಇಲ್ಲ ಎಂದು ಹೇಳುವ ಸರಕಾರ ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುತ್ತಿದೆ. ದೇಶದ ಶ್ರೀಮಂತರಿಗೆ ಮಾತ್ರ ಸ್ವಾತಂತ್ರ್ಯ ಬಂದಿದ್ದು, ಬಡವರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಟೀಕಿಸಿದರು. ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿ ಮಾಡುವುದರಿಂದ ಬಡವರಿಗೆ ಯಾವುದೇ ಪ್ರಯೋಜನವಿಲ್ಲ. ಇದರ ಬದಲು ನಿವೇಶನ ರಹಿತರು ಹಾಗೂ ಸಂಕಷ್ಟದಲ್ಲಿರುವ ಬಡವರು ಎಷ್ಟು ಮಂದಿ ಇದ್ದಾರೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಪರಿಸಹಾರ ಸೂಚಿಸಬೇಕು ಎಂದು ಒತ್ತಾಯಿಸಿದರು. ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಸರಕಾರ ಭೂಮಿ ಯೋಜನೆಯನ್ನು ಕೂಡ ಜಾರಿಗೆ ತರಬೇಕು. ಅರ್ಹ ಫಲಾನುಭವಿಗಳಿಗೆ ಭೂಮಿ ನೀಡದೇ ಇದ್ದರೆ ಸಾವಿರಾರು ನಿವೇಶನ ರಹಿತರನ್ನು ಸೇರಿಸಿ ಪ್ರತಿಭಟನೆ ನಡೆಸುವುದಾಗಿ ಕೆ.ಮೊಣ್ಣಪ್ಪ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಹೆಚ್.ಸಿ.ಸಣ್ಣಪ್ಪ, ಪಿ.ಎಸ್.ಸುರೇಶ್ ಹಾಗೂ ಮಹಮ್ಮದ್ ಆಲಿ ಉಪಸ್ಥಿತರಿದ್ದರು.









