ಮಡಿಕೇರಿ NEWS DESK ಆ.31 : ಕಾಡು ಕಡಿಯುವ ಯಂತ್ರಗಳ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಒಂದೇ ಬಿಲ್ ಗೆ ಎರಡು ಬಾರಿ ಹಣ ಪಾವತಿ ಮಾಡಿದ ಆರೋಪ ತನಿಖೆಯಿಂದ ಸಾಬೀತಾದ ಹಿನ್ನೆಲೆ ಮಡಿಕೇರಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಹಳ ವಿರುದ್ಧ ಕ್ರಮ ಕೈಗೊಂಡು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಮಡಿಕೇರಿ ನಗರಸಭೆಯ ಹಿಂದಿನ ಪೌರಾಯುಕ್ತರಾದ ಪ್ರಸ್ತುತ ಚಾಮರಾಜನಗರ ನಗರಸಭೆಯಲ್ಲಿರುವ ಎಸ್.ವಿ.ರಾಮದಾಸ್, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ಪ್ರಸ್ತುತ ಹುಣುಸೂರು ನಗರಸಭೆಯಲ್ಲಿರುವ ಸೌಮ್ಯ ಕೆ., ಹಿಂದಿನ ಲೆಕ್ಕಾದೀಕ್ಷಕರು, ಪ್ರಸ್ತುತ ವಿರಾಜಪೇಟೆ ಪುರಸಭೆಯ ಕಚೇರಿ ವ್ಯವಸ್ಥಾಪಕರಾದ ಕೆ.ಬಿ.ಸುಜಾತ, (ಪ್ರಬಾರ) ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ಬಿ.ಆರ್.ಹರಿಣಿ ಅವರುಗಳ ಮೇಲಿನ ಆರೋಪವು ರುಜುವಾತು ಆಗಿರುತ್ತದೆ. ಆದುದರಿಂದ ಇವರುಗಳ ವಿರುದ್ಧ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 8(iii)ರನ್ವಯ ಮುಂದಿನ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆಯೊಂದಿಗೆ ಒಂದೇ ಬಿಲ್ ಗೆ ಎರಡು ಬಾರಿ ಹಣ ಪಾವತಿಸಿರುವುದರಿಂದ ರೂ.6.320 ಮೊತ್ತವನ್ನು ವಸೂಲಿ ಮಾಡಿ ನಗರಸಭೆ ನಿಧಿಗೆ ಜಮಾ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಪ್ರಕರಣದ ಕುರಿತು ಮಡಿಕೇರಿ ನಗರಸಭೆಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸದಸ್ಯ ಅಮೀನ್ ಮೊಹಿಸಿನ್ ಅವರು 2024 ಜು.23ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಮಡಿಕೇರಿ ನಗರಸಭೆಯ ಚುನಾಯಿತ ಸದಸ್ಯ ಕೆ.ಎಂ.ಅಪ್ಪಣ್ಣ ಅವರಿಗೆ ಸೇರಿದ “ಪ್ಲಾಂಟರ್ಸ್ ವರ್ಲ್ಡ್” ಎಂಬ ವ್ಯವಹಾರದ ಸಂಸ್ಥೆಯ ಮೂಲಕ ಮಡಿಕೇರಿ ನಗರಸಭೆಯ ಕಾಡುಕಡಿಯುವ ಯಂತ್ರಗಳ ದುರಸ್ತಿ ಕಾರ್ಯವನ್ನು ನಿಯಮಬಾಹಿರವಾಗಿ ಮಾಡಲಾಗಿದೆ. ಒಂದೇ ಕೆಲಸಕ್ಕೆ ಎರಡೆರಡು ಬಿಲ್ಲುಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಹಣ ಪಾವತಿಸಿ ಅಧಿಕಾರ ದುರುಪಯೋಗ ಮಾಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದರಿಂದ ಸೂಕ್ತ ತನಿಖೆ ನಡೆಸಿ ಹಣ ದುರಪಯೋಗವಾಗಿದ್ದಲ್ಲಿ, ನಷ್ಟ ಮತ್ತು ದುರುಪಯೋಗಕ್ಕೆ ಸಂಬಂಧಿಸಿದ ಅಧಿಕಾರಿ ಹಾಗೂ ನೌಕರರ ಮೇಲೆ ಕಾನೂನು ಪ್ರಕಾರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ಅಲ್ಲದೆ ಸಂಸ್ಥೆಗೆ ಎರಡು ಬಾರಿ ಪಾವತಿಯಾಗಿರುವ ಹೆಚ್ಚಿನ ಹಣವನ್ನು ಸಂಸ್ಥೆಯಿಂದ ಕಾನೂನು ಪ್ರಕಾರ ಮರಳಿ ಪಡೆಯುವಂತೆ ಮತ್ತು ಅಧಿಕಾರ ದುರುಪಯೋಗಪಡಿಸಿ ಲಾಭದಾಯಕ ವವ್ಯಹಾರ ಮಾಡಿರುವ ಚುನಾಯಿತ ಸದಸ್ಯ ಕೆ.ಎಂ.ಅಪ್ಪಣ್ಣ ಅವರ ಮೇಲೆ ಕಾನೂನು ಪ್ರಕಾರ ಅವರ ಸದಸ್ಯತ್ವವನ್ನು ಸಹ ರದ್ದುಗೊಳಿಸುವಂತೆ ಅಮೀನ್ ಮೊಹಿಸಿನ್ ಒತ್ತಾಯಿಸಿದ್ದರು. ದೂರಿನ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಮಡಿಕೇರಿ ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಹಾಗೂ ಮಂಡನಾಧಿಕಾರಿಯಾಗಿ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಗಳನ್ನು ನೇಮಕ ಮಾಡಿದ್ದರು.










