ವಿರಾಜಪೇಟೆ ಸೆ.9 NEWS DESK : ಹಿರಿಯರನ್ನು ಪ್ರತಿಯೊಬ್ಬರು ಕೂಡ ಗೌರವಿಸಬೇಕು ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಹೇಳಿದರು. ಸಂತ ಅನ್ನಮ್ಮ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ಮದರ್ ತೆರೇಸಾ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿರಾಜಪೇಟೆಯ ಮದರ್ ತೆರೇಸಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರನ್ನು ಗೌರವಿಸುವುದು ಗಮನಾರ್ಹ ವಿಚಾರವಾಗಿದೆ. ಈ ಧರ್ಮಸಭೆಯನ್ನು ಹಿರಿಯರು ಕಟ್ಟಿ ಬೆಳೆಸಿದ್ದು, ಧರ್ಮ ಕೇಂದ್ರದಲ್ಲಿ ಹಲವಾರು ಜನರು ಸೇವೆಯನ್ನು ಸಲ್ಲಿಸಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಪ್ರಶಂಸನೀಯ. ಆ ನಿಟ್ಟಿನಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿ ಮಹತ್ವದ್ದಾಗಿದೆ ಎಂದರಲ್ಲದೆ ಮತ್ತಷ್ಟು ಸಮಾಜಮುಖಿ ಕಾರ್ಯಗಳು ಸೇವಾ ಕೇಂದ್ರದ ಮುಖಾಂತರ ಜರುಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮದರ್ ತೆರೇಸಾ ಸೇವಾ ಕೇಂದ್ರದ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಐ ಪೆರಿಗ್ರೀನ್ ಎಸ್ ಮಚ್ಚಾಡೋ, ನಮ್ಮ ಸೇವಾ ಕೇಂದ್ರದ ವತಿಯಿಂದ ಹಿರಿಯ ನಾಗರಿಕರಿಗೆ ಗೌರವವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಧರ್ಮ ಕೇಂದ್ರ ಭಕ್ತರು ಹಾಗೂ ದಾನಿಗಳ ನೆರವಿನಿಂದ ಯಶಸ್ವಿಯಾಗಿ ನಡೆಯುತ್ತಿದೆ. ಮದರ್ ತೆರೇಸಾ ಸೇವಾ ಕೇಂದ್ರ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಸರ್ವರ ನೆರವಿನಿಂದ ಅದು ಸಾಕಾರಗೊಂಡಿದೆ. ಇನ್ನು ಮುಂದೆಯು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉದ್ದೇಶ ಸೇವಾ ಕೇಂದ್ರಕ್ಕಿದೆ. 2021 ರಲ್ಲಿ ಆರಂಭಗೊಂಡ ನಮ್ಮ ಸೇವಾ ಕೇಂದ್ರವು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷರಾದ ಮಾರ್ಟಿನ್ ಬರ್ನಾಡ್, ಮದರ್ ತೆರೇಸಾ ಸೇವಾ ಕೇಂದ್ರದ ಸದಸ್ಯರು ಹಾಗೂ ಸಂತ ಅನ್ನಮ್ಮ ಪಾಲಕ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಜೋಕಿಂ ರಾಡ್ರಿಗೀಸ್, ಉದ್ಯಮಿ ಚೋಪಿ ಜೋಸೆಫ್, ಜೇಮ್ಸ್ ಮೆನೇಜಸ್, ಪ್ರಮುಖರಾದ ಜಾನ್ ಪ್ರಸನ್ನ, ನಿವೃತ್ತ ಪ್ರಾಂಶುಪಾಲರಾದ ಚಾಲ್ರ್ಸ್ ಡಿಸೋಜಾ ಹಾಗೂ ಡೀನ್ ಸಾಲ್ವೋ ಡಿಸೋಜ ಸಂಘದ ಸದಸ್ಯರಾದ ಕೆ.ಟಿ. ಥೋಮಸ್ ಅರುಣ ಆನ್ಸಿ ಡಿಸೋಜಾ, ಅನಿತಾ ನರೋನ, ಮದರ್ ತೆರೆಸಾ ಸೇವಾ ಕೇಂದ್ರದ ಸದಸ್ಯರುಗಳು, ಪದಾಧಿಕಾರಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು. ವಿದ್ಯಾರ್ಥಿಗಳಾದ ಮರಿಯಾ ಕುರಿಯಕೋಸ್, ಏನನ್ ಮೆಂಡೋಂಜಾ, ದಿಯಾ, ಜನಿಫರ್ ಅಲ್ವರಿಸ್, ದಿವಿನ ಸಾಲ್ಡನ ಅವರಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ನಂತರ ಸಂತ ಅನ್ನಮ್ಮ ಚರ್ಚ್‍ನ ಸಹಾಯಕ ಗುರುಗಳಾದ ಫಾ. ಅಭಿಲಾಶ್, ಬೆಂಗಳೂರುವಿನ ಸಂತ ಜೋಸೆಫರ ಸ್ವಾಯತ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರಾದ ಗಾಡ್ವಿನ್ ಡಿಸೋಜಾ, ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಅರುಣ ಆನ್ಸಿ ಡಿಸೋಜ, ದಂತ ವೈದ್ಯರಾದ ಡಾ. ಮರಿಯ, ಸಮಾಜ ಸೇವಕರಾದ ಲಾರೆನ್ಸ್, ಹಾಡುಗಾರರಾದ ಪಿಯೂಷ್ ಮೆನೇಜಸ್ ಹಾಗೂ ಪಿ.ಜೆ.ಜಾಯ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೋರಂಜನ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಮದರ್ ತೆರೇಸಾ ಸೇವಾ ಕೇಂದ್ರದ ಸದಸ್ಯರು ಹಾಗೂ ಸದಸ್ಯರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಅಗಲಿದ ಸದಸ್ಯರಿಗೆ ಸಂತಾಪವನ್ನು ಸೂಚಿಸಲಾಯಿತು.











