ಮಡಿಕೇರಿ NEWS DESK ಸೆ.11 : ರಾಜ್ಯ ಸರಕಾರದ ವತಿಯಿಂದ ನಡೆಯುವ ಜಾತಿ ಜನಗಣತಿ ಸಂದರ್ಭ ನಗಣ್ಯ ಆ್ಯನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ, ಭಾಷೆ, ಮಾತೃಭಾಷೆ ಮತ್ತು ಧರ್ಮದ ಕಾಲಂ ನಲ್ಲಿ ಸರ್ವ ಕೊಡವರು “ಕೊಡವ” ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇದೇ ಸೆ.22 ರಿಂದ ನಡೆಸುವ ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಕೊಡವರ ಸಮಗ್ರ ಸಬಲೀಕರಣಕ್ಕಾಗಿ “ಕೊಡವ” ಎಂದು ನಮೂದಿಸುವುದು ಅತ್ಯವಶ್ಯಕವಾಗಿದೆ. ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಹಕ್ಕುಗಳು ಖಾತ್ರಿಯಾಗಬೇಕಾದಲ್ಲಿ ಕೊಡವ ಎಂದು ದಾಖಲಿಸಿ ಎಂದು ಕರೆ ನೀಡಿದ್ದಾರೆ. ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದಾರೆ. ವಿಭಿನ್ನ ಗುರುತು, ಭಾಷೆ ಮತ್ತು ಸಂಸ್ಕöÈತಿಯನ್ನು ಹೊಂದಿರುವ ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದಾರೆ. ಜನಗಣತಿದಾರರು ನಿಮ್ಮ ಮನೆ ಮನೆಗೆ ಭೇಟಿ ನೀಡುವಾಗ, ಪ್ರತಿಯೊಬ್ಬ ಕೊಡವರೂ ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸಬೇಕು. ಇದು ರಾಜಕೀಯ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ ಜಾನಪದ ಉನ್ನತಿಯನ್ನು ಸಾಧಿಸಲು ನಿರ್ಣಾಯಕವಾಗಿದೆ. ಅಲ್ಲದೆ ನಮ್ಮ ಸೂಕ್ಷ್ಮಾತಿಸೂಕ್ಷ್ಮ ಡೇಟಾವನ್ನು ದೃಢೀಕರಿಸುತ್ತದೆ. ಈ ಪ್ರಕ್ರಿಯೆಯು ಕೇಂದ್ರ ಸರಕಾರದ 2026-27 ರ ರಾಷ್ಟ್ರೀಯ ಜನಸಂಖ್ಯಾ ಗಣತಿಯ ಪ್ರಸ್ತಾವಿತ ಅನುಷ್ಠಾನಕ್ಕೆ ಮತ್ತು ಅಖಿಲ ಭಾರತ ಜಾತಿ ಗಣತಿಗೆ ಆಧಾರವಾಗಿ ಸಾಂವಿಧಾನಿಕ ಖಾತರಿಯನ್ನು ಪಡೆಯಲು ಮತ್ತಷ್ಟು ಆಧಾರವಾಗಲಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ. ಸಿಎನ್‌ಸಿ ಸಂಘಟನೆ ತನ್ನ ನಿರಂತರ ಹೋರಾಟದ ಪ್ರಯಾಣದಲ್ಲಿ ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾಗಿದ್ದ ಡಾ.ದ್ವಾರಕನಾಥ್ ಆಯೋಗವನ್ನು ಭೇಟಿಯಾಗಿ ಕೊಡವರ ಹಕ್ಕುಗಳ ಕುರಿತು ಪ್ರತಿಪಾದಿಸುತ್ತಿತ್ತು. “ಕೊಡಗರು” ಎಂದು ಇದ್ದ ‘ಕೊಡವ’ ಪದದ ಬಗ್ಗೆ 2008 ರಲ್ಲಿ ಅವರಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಕೊಡವರ ನೈಜ ಹಕ್ಕೊತ್ತಾಯಕ್ಕೆ ಸ್ಪಂದಿಸಿದರು. ಗಂಭೀರ ದೋಷವನ್ನು ವಿವೇಚನಾಯುಕ್ತ ಮನಸ್ಸಿನಿಂದ ಸರಿಪಡಿಸಲು ಮುಂದಾದರು. ಇದಲ್ಲದೆ, 2010 ರಲ್ಲಿ “ಕೊಡಗರು” ಎನ್ನುವ ವಿಚಿತ್ರವಾದ ಪದವನ್ನು ಕಿತ್ತೊಗೆದು “ಕೊಡವ” ಎನ್ನುವ ಜಾನಪದ-ಶಾಸ್ತ್ರೀಯ ಪದವನ್ನು ಪುರಸ್ಕರಿಸಿ ತಿದ್ದುಪಡಿ ಮಾಡಲು ಶಿಫಾರಸ್ಸು ಮಾಡಿದರು. ಆದರೆ ನಿಯಮಗಳ ಉಲ್ಲಂಘನೆಯ ಮೂಲಕ ಆಡಳಿತ ವ್ಯವಸ್ಥೆ ನಮ್ಮ ಕಾನೂನುಬದ್ಧ ಹಕ್ಕುಗಳನ್ನು ನಿರಾಕರಿಸಿತು. ಮತ್ತೆ ಸಿಎನ್‌ಸಿ ತನ್ನ ವಕೀಲ ಬಲ್ಲಚಂಡ ಬೊಳ್ಳಿಯಪ್ಪ ಅವರ ಸಹಕಾರದೊಂದಿಗೆ ರಾಜ್ಯ ಶ್ರೇಷ್ಠ ನ್ಯಾಯಾಲಯವನ್ನು ಸಂಪರ್ಕಿಸಿತು. ಸಿಎನ್‌ಸಿಯ ಸುದೀರ್ಘ ಕಾನೂನು ಹೋರಾಟದ ಫಲವಾಗಿ 2021 ಡಿ.8 ರಂದು ಕೊಡವ ಶಾಸ್ತ್ರೀಯ ನಾಮಕರಣದ ಹಕ್ಕನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ನೀಡಿದ ಮಹತ್ವದ ಹೈಕೋರ್ಟ್ ತೀರ್ಪಿನ ಅನುಸಾರ ಎತ್ತಿಹಿಡಿಯಲಾಯಿತು. ಅಂತಿಮವಾಗಿ 2023 ರಲ್ಲಿ ಹಾಲಿ ಸರಕಾರ ತನ್ನ ಗೆಜೆಟ್ ಅಧಿಸೂಚನೆಯ ಮೂಲಕ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ನಮ್ಮನ್ನು “ಕೊಡವ” ಎಂದು ದಾಖಲಿಸಿತು. 1871-72 ರಿಂದ 2031 ರವರೆಗೆ ಬ್ರಿಟಿಷ್ ರಾಜ್ ಸರ್ಕಾರ ನಡೆಸಿದ ಮೊದಲ ಜಾತಿವಾರು ಜನಗಣತಿಯಲ್ಲಿ ಕೊಡವರನ್ನು ಕೊಡವ ಜನಾಂಗ ಎಂದು ದಾಖಲಿಸಲಾಗಿದೆ. ಇದೊಂದು ಮಹತ್ವಪೂರ್ಣ ಅಧ್ಯಾಯ ಎಂಬುವುದನ್ನು ನಾವು ನಿಮ್ಮ ಗಮನಕ್ಕೆ ತರುತ್ತೇವೆ. 18ನೇ ಶತಮಾನದಲ್ಲಿ ಕೊಡವ ಲ್ಯಾಂಡ್‌ನ ಹೊರ ಪ್ರದೇಶದ ಆಡಳಿತಗಾರ ಲಿಂಗರಾಜ ಕೂಡ ತನ್ನ “ಹುಕುಮ್ನಾಮ” ದಲ್ಲಿ ಕೊಡವರನ್ನು ಪ್ರತ್ಯೇಕ ಅಸ್ತಿತ್ವವೆಂದು ಎಣಿಸಿ ದಾಖಲಿಸಿದ್ದಾರೆ. 1941 ರ ಜನಗಣತಿಯ ನಂತರ ಕೊಡವರನ್ನು ಇತರ ಬಹುಸಂಖ್ಯಾತ ಗುಂಪುಗಳೊಂದಿಗೆ ವಿಲೀನಗೊಳಿಸಲಾಯಿತು. ಇದರಿಂದಾಗಿ ನಾವು ಸರ್ಕಾರಿ ದಾಖಲೆಗಳಲ್ಲಿ ನಮ್ಮ ವಿಶಿಷ್ಟ ಗುರುತನ್ನು ಕಳೆದುಕೊಂಡಿದ್ದರಿಂದ ನಮ್ಮ ಭವಿಷ್ಯವು ಕತ್ತಲೆಯಾಯಿತು ಎಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಹಾನ್ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, ಜನಗಣತಿ ಪಟ್ಟಿಯ ಎಲ್ಲಾ ಕಾಲಂಗಳಲ್ಲಿ ಕೊಡವ ಎಂದು ನಮೂದಿಸಬೇಕಾಗಿದೆ. ಈ ಸಮೀಕ್ಷೆ ಸೆ.22 ರಿಂದ ಅ.7 ರವರೆಗೆ 15 ದಿನಗಳ ಕಾಲ ನಡೆಯಲಿದೆ. ಈಗ ನಾವು ಸಾಂವಿಧಾನಿಕ ರಕ್ಷಣೆಗಾಗಿ ಸರಕಾರಿ ದಾಖಲೆಗಳನ್ನು ಸರಿಯಾಗಿ ನಮೂದಿಸಬೇಕು. ನಾಗರಿಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ನಾವು ಕೊಡವರು ಎಂದು ರಾಜ್ಯ ದಾಖಲೆಯಲ್ಲಿ ನಮೂದಿಸಲಾಗದ ಹೊರತು ನಮ್ಮ ಸಮಗ್ರ ಸಬಲೀಕರಣಕ್ಕಾಗಿ ನಾವು ಅಪೇಕ್ಷೆಪಡಲು ಸಾಧ್ಯವಾಗುವುದಿಲ್ಲ.
ಆದ್ದರಿಂದ, 2025 ರ ಜಾತಿವಾರು ಜನಗಣತಿಗಾಗಿ ಕರ್ನಾಟಕ ಹಿಂದುಳಿದ ವರ್ಗ ಆಯೋಗವು ಸೂಚಿಸಿದ ಜಾತಿ-ಭಾಷಾ-ಧರ್ಮದ ಎಲ್ಲಾ ಅಂಕಣಗಳಲ್ಲಿ ಕೊಡವರು ಎಂದು ನಮೂದಿಸುವಂತೆ ಎಲ್ಲಾ ಕೊಡವರು ಹಾಗೂ ಕೊಡವತಿಯರಿಗೆ ಮನವಿ ಮಾಡಿಕೊಳ್ಳುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.










