ಮಡಿಕೇರಿ NEWS DESK ಸೆ.15 : ವಿರಾಜಪೇಟೆ ತಾಲ್ಲೂಕಿನ ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ.ಭೀಮಯ್ಯ ಎಂಬುವವರಿಗೆ ಸೇರಿದ ಹಸುವನ್ನು ಕಳ್ಳತನ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲ್ಲೂಕು ಕೊಂಡಂಗೇರಿ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಆಶಿಕ್(22), ಶಾಹಿದ್(25) ಹಾಗೂ ಹ್ಯಾರೀಸ್(34) ಬಂಧಿತ ಆರೋಪಿಗಳಾಗಿದ್ದಾರೆ. ಸೆ.5ರಂದು ಬೊಳ್ಳಪಂಡ ಎಂ.ಭೀಮಯ್ಯ ಅವರ ಹಸು ಕಾಣೆಯಾಗಿರುವ ಕುರಿತು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು. ಹ್ಯಾರೀಸ್ ಎಂಬಾತ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರಲ್ಲಿ ನಡೆದ ಗೋವು ಕಳವು ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ಮಹೇಶ್ ಕುಮಾರ್.ಎಸ್, ವಿರಾಜಪೇಟೆ ವೃತ್ತ ನಿರೀಕ್ಷಕ ಪಿ.ಅನೂಪ್ ಮಾದಪ್ಪ, ಗ್ರಾಮಾಂತರ ಠಾಣಾಧಿಕಾರಿ ಲತಾ.ಎನ್.ಜೆ, ಸಿಬ್ಬಂದಿಗಳಾದ ಸಾಜನ್, ಜೋಸ್ ನಿಶಾಂತ್, ಸಂತೋಷ್ ಚೌಹನ್, ಅಬ್ದುಲ್ ಮಜೀದ್, ಬೋಪಣ್ಣ ಅವರುಗಳು ಕಾರ್ಯಾಚರಣೆ ನಡೆಸಿದರು.










