
ಮಡಿಕೇರಿ NEWS DESK ಸೆ.20 : ಮಾನಸಿಕ ಅಸ್ವಸ್ಥರ ಆರೈಕೆಗಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವೊಂದು ಸರಕಾರದ ನಿಯಮಗಳನ್ನು ಉಲ್ಲಂಘಸಿ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ನಗರಸಭಾ ಸದಸ್ಯ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಸರಕಾರದ ಯೋಜನೆಯ ಪ್ರಕಾರ ನಿಗಧಿತ ಮನೋರೋಗಿಗಳು ಹಾಗೂ ಅಗತ್ಯ ಸಿಬ್ಬಂದಿ ವರ್ಗ ಸುಸಜ್ಜಿತ ಕಟ್ಟಡದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಪರ್ಯಾಸವೆಂದರೆ ಇಲ್ಲಿ ಯಾವುದೇ ವೃತ್ತಿಪರ ಸಿಬ್ಬಂದಿಗಳಿಲ್ಲ, ಒಬ್ಬ ಅಡುಗೆ ಸಹಾಯಕ ಹಾಗೂ ಕೆಲವೇ ಮಂದಿ ಬುದ್ದಿಮಾಂದ್ಯ ವ್ಯಕ್ತಿಗಳ ಹಾಜರಾತಿಯೊಂದಿಗೆ ಕೇಂದ್ರವನ್ನು ನಡೆಸುತ್ತಾ ಮಾನಸಿಕ ಆರೋಗ್ಯ ಕಾಯಿದೆ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ.
ಈ ಆರೈಕೆ ಕೇಂದ್ರವನ್ನು ನಿರ್ವಹಿಸಲು ಸರಕಾರದಿಂದ ವಾರ್ಷಿಕವಾಗಿ ಲಕ್ಷಾಂತರ ರೂ. ಹಣ ಬರುತ್ತಿದೆ. ಕೇಂದ್ರದ ಉಸ್ತುವಾರಿ ವಹಿಸಿರುವ ವ್ಯಕ್ತಿ ತಿಂಗಳಿಗೆ ಸುಮಾರು 20 ರಿಂದ 30 ಫಲಾನುಭವಿಗಳ ಹಾಜರಾತಿಯನ್ನು ತೋರಿಸಿ ಹಣ ದುರುಪಯೋಗ ಪಡಿಸುತ್ತಿರುವುದು ಕಂಡು ಬಂದಿದೆ. ನಾಲ್ವರು ವೃತ್ತಿಪರ ಸಿಬ್ಬಂದಿಗಳು ಈ ಯೋಜನೆಯಡಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಅಡುಗೆ ಸಹಾಯಕರನ್ನು ನೇಮಿಸಿ ಉಳಿದ ಸಿಬ್ಬಂದಿಗಳ ವೇತನವನ್ನು ಕೂಡ ಪಡೆಯಲಾಗುತ್ತಿದೆ. ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥರ ಪಾಲಕರಿಂದ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಪಡೆದು ಫಲಾನುಭವಿಗಳೆಂದು ತೋರಿಸಿ ಅವರ ಹೆಸರುಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಅವರ ಹಾಜರಾತಿಯನ್ನು ತೋರಿಸಿ, ಅವರಿಗೆ ಸೇರಬೇಕಾದ ಮಾಸಿಕ ವೇತನವನ್ನು ಪಡೆಯುತ್ತಿರುವ ಕುರಿತು ಮಾಹಿತಿ ತಿಳಿದುಬಂದಿದೆ ಎಂದು ಮನ್ಸೂರ್ ಆಲಿ ಆರೋಪಿಸಿದ್ದಾರೆ. ಕೇಂದ್ರದಲ್ಲಿ ನಿಯಮ ಉಲ್ಲಂಘನೆಯಾಗುತ್ತಿರುವುದು ಮತ್ತು ಹಣ ದುರುಪಯೋಗವಾಗುತ್ತಿರುವ ವಿಚಾರ ಆರೋಗ್ಯ ಇಲಾಖೆಯ ಗಮನಕ್ಕೆ ಬಾರದೆ ಇರುವುದು ವಿಷಾದನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಒಬ್ಬನೇ ವ್ಯಕ್ತಿಯ ಉಸ್ತುವಾರಿಗೆ ಕೇಂದ್ರವನ್ನು ವಹಿಸಲಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೇಂದ್ರದಲ್ಲಿ ನಡೆದಿರುವ ನಿಯಮ ಉಲ್ಲಂಘನೆ ಮತ್ತು ಅನುದಾನ ದುರ್ಬಳಕೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಆ ಮೂಲಕ ಅವ್ಯವಹಾರವನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ನಗರಸಭಾ ಸದಸ್ಯರು ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಪಕ್ಷದ ನಗರಾಧ್ಯಕ್ಷ ಮಹಮ್ಮದ್ ಆಲಿ ಮತ್ತು ಕಾರ್ಯದರ್ಶಿ ಉಬೈದುಲ್ಲ ಹಾಜರಿದ್ದರು.








