






ಮಡಿಕೇರಿ NEWS DESK ಸೆ.30: ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ವೈಭವದ ದಸರಾ ಆಚರಣೆ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹಿಂದಿನ ಸಾಲಿಗಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿದ ಎಸ್.ಪಿ. ರಾಮರಾಜನ್ ಅವರು ಈ ಬಾರಿ ಮಡಿಕೇರಿ ದಸರಾಕ್ಕೆ ಕೆಎಸ್‌ಆರ್‌ಪಿ, ಡಿಎಆರ್ ಸಹಿತ ಒಟ್ಟು 1500 ಹಾಗೂ ಗೋಣಿಕೊಪ್ಪ ದಸರಾ ಕಾರ್ಯಕ್ರಮಕ್ಕೆ 600 ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ಬಳಸಿಕೊಳ್ಳಲಾಗುತ್ತಿದೆ. ಮಹಿಳೆಯರ ಸುರಕ್ಷತೆ, ಜನ ಸಂದಣಿ ಏರ್ಪಡುವ ಸ್ಥಳಗಳಲ್ಲಿ ಸೂಕ್ತ ನಿಯಂತ್ರಣಕ್ಕೆ ಜಂಬೋ ತಂಡಗಳನ್ನು ರಚಿಸಲಾಗಿದೆ. ಓರ್ವ ಮಹಿಳಾ ಮತ್ತು ಓರ್ವ ಎಸ್.ಐ. ದರ್ಜೆಯ ಅಧಿಕಾರಿ ಸಹಿತ 10ರಿಂದ 15 ಮಂದಿ ಸಿಬ್ಬಂದಿಗಳು ಈ ತಂಡದಲ್ಲಿರಲಿದ್ದು, ಅಹಿತಕರ ಘಟನೆಗಳ ಬಗ್ಗೆ ಹದ್ದಿನ ಕಣ್ಣಿಡಲಿದ್ದಾರೆ. ಮಡಿಕೇರಿಯಲ್ಲಿ 10 ಮತ್ತು ಗೋಣಿಕೊಪ್ಪ ದಸರಾದಲ್ಲಿ 4 ಜಂಬೋ ತಂಡಗಳು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಹೇಳಿದರು. ಮಡಿಕೇರಿ ನಗರದಲ್ಲೇ 75 ಅತ್ಯಾಧುನಿಕ ಸಿ.ಸಿ ಕ್ಯಾಮರಾ ಸಹಿತ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಅದೇ ಮಾದರಿಯಲ್ಲಿ ಗೋಣಿಕೊಪ್ಪದಲ್ಲೂ ಅಗತ್ಯ ಸಿ.ಸಿ. ಕ್ಯಾಮರಾ ಅಳವಡಿಸಿದ್ದು, ಆಯಾ ಠಾಣೆಗಳಲ್ಲಿಯೇ ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದು ಹೇಳಿದರು. ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಜೊತೆ ಈಗಾಗಲೇ ಚರ್ಚೆ ನಡೆಸಿ ಅ.2ರಂದು ಜಿಲ್ಲೆಯ ಒಳಗೆ ಭಾರೀ ವಾಹನ ಸಂಚಾರ ನಿಷೇಧಕ್ಕೆ ಮನವಿ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಭಾರೀ ವಾಹನಗಳ ಸಂಚಾರಕ್ಕೆ ಬದಲೀ ಮಾರ್ಗಗಳನ್ನು ಅನುಮತಿಸಲಾಗಿದೆ. ದಸರಾ ವೀಕ್ಷಣೆಗೆ ಬರುವ ಜನರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಮೈದಾನಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು. ಮಡಿಕೇರಿ ಮತ್ತು ಗೋಣಿಕೊಪ್ಪದ ಸ್ಥಳೀಯ ನಿವಾಸಿಗಳು ಪೊಲೀಸ್ ಇಲಾಖೆ ಜೊತೆಯಲ್ಲಿ ಕೈ ಜೋಡಿಸಬೇಕು ಎಂದು ಎಸ್.ಪಿ ರಾಮರಾಜನ್ ಮನವಿ ಮಾಡಿದರು. ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ಮೇಲೆ ಕಣ್ಣಿಡಲಾಗುತ್ತದೆ. ಇಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರ ವಿಡಿಯೋ, ಫೋಟೋ ಹಾಗೂ ವಿಳಾಸ ಪಡೆದು ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಕಾರ್ಯಕ್ಕೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸಹಿತ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಅಧಿಕಾರಿಯನ್ನೂ ನೇಮಿಸಲಾಗಿದೆ ಎಂದು ವಿವರಿಸಿದರು. ಕಾನೂನು ಕ್ರಮಗಳ ಕುರಿತು ಈಗಾಗಲೇ ದಶ ಮಂಟಪ ಸಮಿತಿಗಳಿಗೆ ವಿವರಿಸಲಾಗಿದ್ದು, ಅವರೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಜನ ಸಂದಣಿ ಏರ್ಪಡುವ ಸ್ಥಳದಲ್ಲಿ ಮಂಟಪಗಳ ಪ್ರದರ್ಶನ ಮಾಡದಂತೆ ಮನವಿ ಮಾಡಲಾಗಿದ್ದು, ಸಮಿತಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕರು ಕೂಡ ಮಂಟಪಗಳಿಂದ ಅಂತರ ಕಾಯ್ದುಕೊಂಡು ದಶ ಮಂಟಪಗಳ ಚಲನ ವಲನ ವೀಕ್ಷಣೆ ಮಾಡಬೇಕು. ವಯೋವೃದ್ದರು, ಮಕ್ಕಳ ಜೊತೆಯಲ್ಲಿ ಜನ ಸಂದಣಿ ಏರ್ಪಡುವ ಸ್ಥಳಗಳಿಗೆ ತೆರಳುವುದನ್ನು ಸಾರ್ವಜನಿಕರು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಎಸ್.ಪಿ. ರಾಮರಾಜನ್ ಮನವಿ ಮಾಡಿದರು. ಸಾರ್ವಜನಿಕರು ಸೇರುವ ಕಡೆಗಳಲ್ಲಿ ಪೊಲೀಸ್, ವೈದ್ಯಕೀಯ ಸೇವೆ ಲಭ್ಯವಿರುವಂತೆ ಚೆಕ್ ಪೋಸ್ಟ್ಗಳನ್ನು ತೆರೆಯಲಾಗುತ್ತದೆ. ಸಾರ್ವಜನಿಕರು ಇದರ ಸೇವೆಯನ್ನು ಪಡೆಯಬಹುದು ಎಂದು ಎಸ್.ಪಿ. ರಾಮರಾಜನ್ ಮಾಹಿತಿ ನೀಡಿದರು.











