ಮಡಿಕೇರಿ NEWS DESK ಸೆ.30 : ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5)ರಲ್ಲಿ ದತ್ತವಾದ ಅಧಿಕಾರದಂತೆ ಅಕ್ಟೋಬರ್ 2 ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್, 3 ರಂದು ಬೆಳಗ್ಗೆ 10 ಗಂಟೆ ವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ದಿನಾಂಕ 02-10-2025 ರಂದು ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 03-10-2025 ಬೆಳಗ್ಗೆ 10 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಕಲೇಶಪುರ, ಮೈಸೂರು ಮಾರ್ಗವಾಗಿ ಸಂಚರಿಸುವುದು. ದಿನಾಂಕ 02-10-2025 ರಂದು ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 03-10-2025 ಬೆಳಗ್ಗೆ 10 ಗಂಟೆಯವರೆಗೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ಬಿಳಿಕೆರೆ, ಕೆ.ಆರ್.ನಗರ, ಹೊಳೆನರಸೀಪುರ ಹಾಸನ ಸಕಲೇಶಪುರ ಮಾರ್ಗವಾಗಿ ಸಂಚರಿಸುವುದು. ದಿನಾಂಕ 02-10-2025 ರಂದು ಸಂಜೆ 4 ಗಂಟೆಯಿಂದ ದಿನಾಂಕ 03-10-2025 ರಂದು ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.










