
ಮಡಿಕೇರಿ NEWS DESK ಅ.3 ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಗಲಾಟೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ವೇದಿಕೆಯನ್ನೇರಿದ ಡಿವೈಎಸ್‌ಪಿಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ವೈಭವದ ಮಡಿಕೇರಿ ದಸರಾ ಜನೋತ್ಸವದ ಅಂತಿಮ ಹಂತದಲ್ಲಿ ಕಹಿ ಘಟನೆಯೊಂದು ನಡೆದಿದೆ. ರಾತ್ರಿಪೂರ್ತಿ ನಗರದ ಮುಖ್ಯ ರಸ್ತೆಗಳಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಸಿದ ಮಂಟಪಗಳಿಗೆ ಬಹುಮಾನ ಘೋಷಿಸುವ ಸಂದರ್ಭ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯನ್ನೇರಿದ ಕರವಲೆ ಶ್ರೀ ಭಗವತಿ ದೇವಾಲಯ ಮಂಟಪದ ಸದಸ್ಯರು ತೀರ್ಪು ಸರಿಯಿಲ್ಲವೆಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಮೋಸ, ಮೋಸ’ ಎಂದು ಘೋಷಣೆಗಳನ್ನು ಕೂಗುತ್ತಾ ವೇದಿಕೆ ಮೇಲೆ ಹೋದ ದೊಡ್ಡ ಸಂಖ್ಯೆಯ ಯುವಕರು ಅಲ್ಲಿದ್ದ ವಸ್ತುಗಳನ್ನು ಎಸೆಯಲು ಆರಂಭಿಸಿದರು. ಈ ಸಂದರ್ಭ ಎಚ್ಚೆತ್ತುಕೊಂಡ ಪೊಲೀಸರು ವೇದಿಕೆಗೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಗಲಾಟೆ ಮಾಡುತ್ತಿದ್ದ ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. *ಓರ್ವನ ಬಂಧನ* ಡಿವೈಎಸ್‌ಪಿ ಸೂರಜ್ ಅವರು ಗಾಯಗೊಂಡಿರುವ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಯಕ್ಷಿತ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು. ಗಲಾಟೆ ಮಾಡುತ್ತಿದ್ದವರನ್ನು ನಿಯಂತ್ರಿಸಲು ವೇದಿಕೆ ಮೇಲೆ ಹೋದ ಡಿವೈಎಸ್‌ಪಿ ಹಾಗೂ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಪುಶ್ ಮಾಡಿದ ಪರಿಣಾಮ ಡಿವೈಎಸ್‌ಪಿ ಸೂರಜ್ ಅವರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಕ್ಷಿತ್ ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ದಶಮಂಟಪಗಳಿಗೆ ಬಹುಮಾನ ಘೋಷಿಸುವ ಸಂದರ್ಭ ಪ್ರತಿವರ್ಷ ಈ ರೀತಿಯ ಗೊಂದಲ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕೆಂದು ಮಂಟಪ ಸಮಿತಿಗಳಲ್ಲಿ ನಾವು ಮೊದಲೇ ಮನವಿ ಮಾಡಿಕೊಂಡಿದ್ದೆವು. ಆದರೆ ಮತ್ತೆ ಗಲಾಟೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಬಹುಮಾನ ವಿತರಣೆಯ ವಿಚಾರದಲ್ಲಿ ಉಂಟಾಗುವ ಗೊಂದಲ ನಿವಾರಣೆಗೆ ಸಮಿತಿಗಳು ಸೂಕ್ತ ಚಿಂತನೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.










