
ಮಡಿಕೇರಿ ಅ.6 NEWS DESK : ಕುಶಾಲನಗರ ತಾಲ್ಲೂಕು ಕೊಡವ ಸಮಾಜದ ವತಿಯಿಂದ ಆಯೋಜಿಸಲಾದ ಕೈಲ್ ಪೋಳ್ದ್ ಸಂತೋಷ ಕೂಟ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕೊಡಗಿನ ಹಾಗೂ ವಿಶೇಷವಾಗಿ ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳು ವಿಶೇಷ ಪಾತ್ರ ನಿಭಾಯಿಸುತ್ತಾ ಬಂದಿವೆ. ಸಮಾಜದ ಬಾಂಧವರಲ್ಲಿ, ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳನ್ನು ಅನುಸರಿಸುತ್ತಾ ಬೆಳೆಸುವ ಗುರುತರ ಜವಾಬ್ದಾರಿಯನ್ನು ಕೊಡವ ಸಮಾಜದವರು ವಹಿಸಿಕೊಳ್ಳಬೇಕು. ಒಂದು ಸಮಾಜ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲು ಅದರ ಸಂಸ್ಕೃತಿ, ಭಾಷೆ ಹಾಗೂ ಆಚರಣೆಗಳನ್ನು ಪೋಷಿಸಿ ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಾ ನಮ್ಮ ಆಚರಣೆಗಳನ್ನು ಜಗತ್ತಿಗೆ ಪರಿಚಯಿಸುವುದರಲ್ಲಿ ನಾವು ಇಂದಿಗೂ ಹಿಂದೆ ಬೀಳಬಾರದು ಎಂದು ಕರೆ ನೀಡಿದರು. ತಾನು ಹಾಗೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ‘ಕೊಡಗರು’ ಎಂದು ಸಂಬೋಧಿಸಲ್ಪಡುತ್ತಿದ್ದ ಶಬ್ದವನ್ನು “ಕೊಡವ” ಎಂಬುದಾಗಿ ತಿದ್ದುಪಡಿ ಮಾಡಿಸಿರುವುದು, ಕೋವಿ ಹಕ್ಕಿನ ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಳ್ಳಲು ಕ್ರಮ ಕೈಗೊಂಡಿರುವುದು, ನಮ್ಮನ್ನು ದಶಕಗಳಿಂದ ಕಾಡುತ್ತಿರುವ ಜಮ್ಮಾ ಬಾಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಮಾತ್ರವಲ್ಲದೆ, ಕೊಡವ ಜನಾಂಗದ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ತಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರು ನನಗೆ ನೀಡಿದ ಅಧಿಕಾರದ ಸದ್ಬಳಕೆಗಾಗಿ ಹಾಗೂ ನಾಡಿನ ಏಳಿಗೆಗಾಗಿ ಎಂದು ಬಣ್ಣಿಸಿದರು. ಈ ಸಂದರ್ಭ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ, ಕುಶಾಲನಗರ ಕೊಡವಾಮೆರ ಕೊಂಡಾಟ ಕೊರವುಕಾರರು ಹಾಗೂ ಸಂಪಾದಕರು ನಡುಬಾಡೆ ಇ-ನ್ಯೂಸ್ ಶ್ರೀ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡವ ಸಮಾಜದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









