
ಮಡಿಕೇರಿ ಅ.10 NEWS DESK : ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಶೇಷವಾಗಿ ಈ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಸಕರು, ರೂ.90 ಲಕ್ಷ ವೆಚ್ಚದಲ್ಲಿ ನೂತನ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಹಲವು ನೂತನ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು, ಕ್ಷೇತ್ರಾದ್ಯಂತ ಉತ್ತಮ ವಿದ್ಯುತ್ ಪೂರೈಸಿ ಕೃಷಿಕರಿಗೆ ಹಾಗೂ ಗ್ರಾಹಕರಿಗೆ ನಿರಂತರವಾಗಿ ತಡೆರಹಿತ ವಿದ್ಯುತ್ ನೀಡಲು ಸರ್ಕಾರದ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟದ ನೂತನ ವಿದ್ಯುತ್ ಮಾರ್ಗಗಳನ್ನು ಅಳವಡಿಸುವುದರೊಂದಿಗೆ, ನೂತನ ವಿದ್ಯುತ್ ಪರಿವರ್ತಕಗಳನ್ನು ಹಾಗೂ ಸಬ್ ಸ್ಟೇಷನ್ ಗಳನ್ನು ಕ್ಷೇತ್ರಾದ್ಯಂತ ಕೈಗೊಂಡಿರುವುದು ತಿಳಿಸಿದರು. ಈ ಸಂದರ್ಭ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕರು, ಆದ್ಯತೆ ಮೇರೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲ್ಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ವಲಯ ಅಧ್ಯಕ್ಷ ಕುಪ್ಪಣ್ಣಮಾಡ ಪ್ರೀತಮ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಸ್ಥಳೀಯ ಪ್ರಮುಖರಾದ ಬುಟಿಯಂಡ ತಂಬಿ, ಬೊಳೇರ ಅಪುಟ್ಟ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









