
ವಿರಾಜಪೇಟೆ ಅ.10 NEWS DESK : ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನವನ್ನು ರೂಪಿಸುವುದರೊಂದಿಗೆ ಅವರಲ್ಲಿರುವ ವಿಶೇಷ ಗುಣಗಳನ್ನು ಹವ್ಯಾಸಗಳನ್ನು ತೋರ್ಪಡಿಸಲು ಎನ್ ಎಸ್ ಎಸ್ ಶಿಬಿರಗಳು ಅತ್ಯುತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಪಟ್ಟು ಕಡಂಗದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಹೆಚ್ಚಿನ ವಿಚಾರಗಳನ್ನು ಕಲಿಯಲು ಹಾಗೂ ಕಲಿತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಬಿರಗಳು ಉತ್ತಮ ವೇದಿಕೆಯಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಹಕಾರ, ಸೌಹಾರ್ದ ಮನೋಭಾವನೆಯನ್ನು ಬೆಳೆಸುತ್ತದೆ. ತಮ್ಮಲ್ಲಿ ಹುದುಗಿರುವ ವಿವಿಧ ಕಲೆ, ಹವ್ಯಾಸಗಳನ್ನು ತೋರ್ಪಡಿಸಲು ಇದೊಂದು ಉತ್ತಮ ವೇದಿಕೆ. ಪ್ರತೀ ವ್ಯಕ್ತಿಯನ್ನು ಬಾಲ್ಯದಲ್ಲಿ ಆತನ ತಂದೆ ತಾಯಿಗಳ ಹೆಸರಿನ ಮೂಲಕ ಗುರುತಿಸುತ್ತಾರೆ. ಅದೇ ವ್ಯಕ್ತಿ ಯವ್ವನವನ್ನು ತಲುಪಿದಂತಹ ಸಂದರ್ಭದಲ್ಲಿ ಆತ ಮಾಡಿದ ಸಾಧನೆಯಿಂದ ಆತನ ಹೆಸರಿನ ಮೂಲಕ ತಂದೆ ತಾಯಿಯವರನ್ನು ಗುರುತಿಸುವಂತಹ ಕೆಲಸ ಆಗಬೇಕು. ಹಣ, ಆರೋಗ್ಯ ಕಳೆದು ಹೋದರೆ ಮತ್ತೆ ಸಂಪಾದಿಸಬಹುದು. ಆದರೆ ನಡತೆಯನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು. ಸಮಾಜ ಸೇವಕರಾದ ಕೋಡಿರ ಪೊನ್ನು ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕು. ಒಳ್ಳೆಯ ಉದಾತ ಚಿಂತಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸ್ವಾಸ್ಥ ಸಮಾಜ ನಿರ್ಮಾಣದ ನಿರ್ಮಾತೃಗಳಾಗಬೇಕೆಂದರು. ನಿವೃತ್ತ ಮುಖ್ಯ ಶಿಕ್ಷಕ ಅನ್ನಂಬೀರ ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಲ್ಲಿ ಸಮಾಜದಲ್ಲಿರುವ ವಿವಿಧ ಸಮಸ್ಯೆ ಹಾಗೂ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಸಹಕರಿಸಬೇಕು. ಭವಿಷ್ಯದಲ್ಲಿ ಸಮಾಜ ಸೇವಕರಾಗಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವುದರೊಂದಿಗೆ ಸಮಾಜದ ಚಿಂತಕರಾಗಿ ಬೆಳೆಯಬೇಕೆಂದರು. ಪಾಂಡ0ಡ ಚಂಗಪ್ಪರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಸೇವೆಯನ್ನು ಮಾಡಲು ಸಿಗುವ ಎಲ್ಲಾ ಅವಕಾಶ ಸರಿಯಾದ ರೀತಿ ಬಳಸಿಕೊಳ್ಳಬೇಕು. ಮೊಬೈಲ್, ಟಿವಿಗಳಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ದೂರವಿದ್ದು ಪುಸ್ತಕಗಳನ್ನು ಹೆಚ್ಚಾಗಿ ಬಳಸುವ ಹವ್ಯಾಸವನ್ನು ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ನಿಮ್ಮ ಅವಶ್ಯಕತೆ ಇದ್ದಾಗ ಸೇವೆ ಮಾಡಲು ಸದಾ ಸಿದ್ದರಿರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಬ್ಬಯ್ಯ,ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾತೃಗಳಾಗಿ ಸೇವಾ ಮನೋಭಾವನೆಯನ್ನು ರೂಡಿಸಿಕೊಂಡು ಮಾಲಿನ್ಯ ರಹಿತವಾದ ಸಮಾಜವನ್ನು ರೂಪಿಸಬೇಕೆಂದರು. ಸ.ಹಿ.ಪ್ರಾ.ಶಾಲೆ ಅರಪಟ್ಟು ಕಡಂಗದ ಪ್ರಭಾರ ಮುಖ್ಯ ಶಿಕ್ಷಕರಾದ ವಿಮಲಾ ಮಾತನಾಡಿ ಶಿಬಿರದ ಅವದಿಯಲ್ಲಿ ಶಿಬಿರಾರ್ಥಿಗಳು ಶಾಲಾ ಆವರಣ ಹಾಗೂ ಗ್ರಾಮದಲ್ಲಿ ನಿರ್ವಹಿಸಿದ ಸ್ವಚ್ಚತೆ ಹಾಗೂ ನೈರ್ಮಲ್ಯದ ಕೆಲಸವನ್ನು ಶ್ಲಾಘಿಸಿದರು. ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ನಿರ್ಮಿತ , ಎನ್ಎಸ್ಎಸ್ ಘಟಕದ ಸ್ವಯಂ ಸೇವಕರು ಹಾಜರಿದ್ದರು.









