
ಮೂರ್ನಾಡು ಅ.11 NEWS DESK : ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 17ನೇ ವರ್ಷದ ಓಣಂ ಹಬ್ಬಾಚರಣೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬಾಚರಣೆಯ ಸಮಾರಂಭವನ್ನು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದುಗಳು ತಮ್ಮತಮ್ಮಲ್ಲಿಯೆ ಆಚಾರ-ವಿಚಾರಗಳು ಬೇರೆ ಬೇರೆಯಾಗಿದ್ದರೂ ಎಲ್ಲರೂ ಒಗ್ಗಟಾಗಿ ಸೇರಿದಾಗ ಹಿಂದೂ ಸಮಾಜ ಭದ್ರಗೊಳ್ಳುತ್ತದೆ. ಕೇರಳ ಸಮಾಜದೊಂದಿಗೆ ಕೊಡಗಿನ ನಂಟು ಆಧ್ಯಾತ್ಮಿಕವಾಗಿ ಹಿಂದಿನಿಂದಲೂ ಬೆಸೆದುಕೊಂಡಿದೆ. ಕೇರಳ ಸಮಾಜದವರು ಶ್ರಮಜೀವಗಳು ಮತ್ತು ಬುದ್ದಿವಂತರಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ. ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್ ಮಾತನಾಡಿ, ನಮ್ಮ ಸಂಸ್ಕøತಿ ಆಚಾರ-ವಿಚಾರಗಳನ್ನು ಪರಿಪಾಲನೆ ಮಾಡಿದಲ್ಲಿ ನಮ್ಮ ಮಕ್ಕಳಿಗೆ ಅದರ ಬಗ್ಗೆ ಅರಿವು ಮೂಡುತ್ತದೆ. ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ, ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು. ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಎಸ್.ರಮೇಶ್, ಜಿಲ್ಲಾ ಸಮಿತಿಯ ಮುಖ್ಯ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್ ಹಾಗೂ ಮಡಿಕೇರಿ ಕೆ.ಎನ್.ಎಸ್.ಎಸ್.ನ ಅಧ್ಯಕ್ಷ ಕೆ.ಕೆ.ಹರೀಶ್‍ಕುಮಾರ್‍ಮಾತನಾಡಿದರು. ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಮುಖ್ಯ ಕಾರ್ಯದರ್ಶಿ ಎನ್.ವಿ. ಉನ್ನಿಕೃಷ್ಣ, ಮಡಿಕೇರಿ ಎಸ್.ಎನ್.ಡಿ.ಪಿ ಅಧ್ಯಕ್ಷ ಟಿ.ಆರ್.ವಾಸುದೇವ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್, ಮಡಿಕೇರಿ ತಾಲ್ಲೂಕು ಎಸ್‍ಎನ್‍ಡಿಪಿಯ ಅಧ್ಯಕ್ಷ ವಾಸುದೇವನ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಹೊದವಾಡ, ವೇದಿಕೆಯಲ್ಲಿ ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್ ಮತ್ತು ಹಿಂದೂ ಮಲಯಾಳಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಬಾಬು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ರಂಗೋಲಿ(ಪೂಕಳಂ) ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಯಿತು. ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್ ಮತ್ತು ಪಾರಾಣೆಯ ಮಾಜಿ ಸೈನಿಕ ಸಂಜುಅವರನ್ನು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುಂಚೆ ಮೂರ್ನಾಡಿನ ಮುಖ್ಯ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಕೇರಳದ ಸಾಂಪ್ರದಾಯಿಕ ಉಡುಪಿ ನಲ್ಲಿ ಮಹಿಳೆಯರು, ಮಕ್ಕಳು ಮತ್ತು ಮಹನೀಯರು, ಚೆಂಡೆ ಮೇಳದವರು, ಮಾವೇಲಿ ಪಾತ್ರಧಾರಿಗಳು ಪಾಲ್ಗೊಂಡು ನೋಡುಗರ ಗಮನ ಸೆಳೆದರು. ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಟಿ.ಕೆ.ಸುಧೀರ್ ಸ್ವಾಗತಿಸಿದರು. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಕಾರ್ಯದರ್ಶಿ ಟಿ.ಕೆ.ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಓಣಂ ಭಕ್ಷ್ಯ ಭೋಜನದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು









