
ಮಡಿಕೇರಿ ಅ.13 NEWS DESK : ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಆಯೋಜಿತ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಭಾನುವಾರ ಸಂಜೆ ಜಿಲ್ಲೆಯ ಶಾಸಕದ್ವಯರು ಜ್ಯೋತಿ ಬೆಳಗಿ, ರೈಡ್ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಮಡಿಕೇರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರ ಅಧ್ಯಕ್ಷತೆಯಲ್ಲಿ ಆಯೋಜಿತ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿ ಸಮಾರಂಭ ಉದ್ಘಾಟಿಸಿದ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, ಕೊಡಗು ಜಿಲ್ಲೆ ಅಸಂಖ್ಯ ಕ್ರೀಡಾಪಟುಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ನೀಡಿದ ಖ್ಯಾತಿಯನ್ನು ಹೊಂದಿದೆ. ಕ್ರೀಡಾ ಚಟುವಟಿಕೆಗಳನ್ನು ಪ್ರತಿಯೊಬ್ಬರು ತೊಡಗಿಸಿಕೊಳ್ಳುವುದು ಅವಶ್ಯವೆಂದ ಅವರು, ಇಂತಹ ಕ್ರೀಡಾ ಚಟುವಟಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೆ ಸಮಚಿತ್ತತೆಯಿಂದ ಬದುಕನ್ನು ಎದುರಿಸಲು ಸಹಕಾರಿಯಾಗಿದೆಯೆಂದು ನುಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮಳೆಯ ಕಾರಣದಿಂದ ದಸರಾ ಸಂದರ್ಭ ನಡೆಯಬೇಕಿದ್ದ ಕಬಡ್ಡಿ ಪಂದ್ಯಾವಳಿಯನ್ನು ಇಂದು ಆಯೋಜಿಸಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಲ್ಲಿ ಗೆಲುವು ಸೋಲಿಗೂ ಮಿಗಿಲಾಗಿ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖವಾಗುತ್ತದೆಂದು ಅಭಿಪ್ರಾಯಿಸಿದರು. ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್ ಮಾತನಾಡಿ, ಕ್ರೀಡಾ ಚಟುವಟಿಕೆಗಳು ನಮಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ನಮ್ಮಲ್ಲಿ ಮೂಡಿಸುತ್ತದೆಂದು ನುಡಿದರು. :: ಶಾಸಕದ್ವಯರಿಂದ ಕಬಡ್ಡಿ…ಕಬಡ್ಡಿ..! :: ಸಭಾ ಕಾರ್ಯಕ್ರಮದ ಬಳಿಕ ಆಯೋಜಿತ ಪತ್ರಕರ್ತರ ತಂಡ ಮತ್ತು ದಸರಾ ಕ್ರೀಡಾ ಸಮಿತಿ ತಂಡಗಳ ನಡುವಣ ಪ್ರದರ್ಶನ ಪಂದ್ಯಕ್ಕೆ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರು, ತಾವೇ ‘ಕಬಡ್ಡಿ…ಕಬಡ್ಡಿ…’ ಎನ್ನುತ್ತ ರೈಡ್ ಮಾಡಿ ಗಮನ ಸೆಳೆÉದರು. ಸಭಾ ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷರಾದ ಮಹೇಶ್ ಜೈನಿ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ, ಮಡಿಕೇರಿ ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ನಗರಸಭಾ ಸದಸ್ಯೆ ಚಿತ್ರಾವತಿ, ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಜಿ.ಸಿ. ಜಗದೀಶ್, ದಶ ಮಂಟಪ ಸಮಿತಿ ಅಧ್ಯಕ್ಷರಾದ ಹರೀಶ್ ಅಣ್ವೇಕರ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಕೆ.ಜಗದೀಶ್, ಕ್ರೀಡಾ ಸಮಿತಿಯ ರವಿ ಕರ್ಕೆರ, ಪ್ರಸನ್ನ ಭಟ್ ಮೊದಲಾದವರು ಉಪಸ್ಥಿತರಿದ್ದರು. :: ರೋಚಕ ಪ್ರದರ್ಶನ ಪಂದ್ಯ :: ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ನೇತೃತ್ವದ ತಂಡ ಹಾಗೂ ಮಂಜು ನೇತೃತ್ವದ ಪತ್ರಕರ್ತರ ಸಂಘದ ನಡುವಿನ ಪ್ರದರ್ಶನ ಪಂದ್ಯ ಕುತೂಹಲಕಾರಿಯಾಗಿ ನಡೆದು, ಅಲ್ಪ ಅಂತರದಿಂದ ಕ್ರೀಡಾ ಸಮಿತಿ ತಂಡ ಗೆಲುವನ್ನು ದಾಖಲಿಸಿತು.ಪಂದ್ಯಾವಳಿಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ತಂಡಗಳು ಪಾಲ್ಗೊಂಡಿದ್ದು, ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು.









