
ಮಡಿಕೇರಿ ಅ.13 NEWS DESK : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣವನ್ನು ಖಂಡಿಸಿ ಪ್ರಗತಿಪರ, ಚಿಂತಕರ, ದಲಿತಪರ ಸಂಘಟನೆಗಳ ಒಕ್ಕೂಟ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಒಕ್ಕೂಟದ ಪ್ರಮುಖರು ಹಾಗೂ ಪದಾಧಿಕಾರಿಗಳು ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರಕಾರ ‘ದೇಶ ದ್ರೋಹ’ದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅಂಬೇಡ್ಕರ್ ವಿಚಾರವಾದಿ ಸಿ.ಜೆ.ಮೋಹನ್ ಮೌರ್ಯ ಅವರು ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿರುದ್ಧ ನಡೆದಿರುವ ಘಟನೆ ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ. ದುಷ್ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರ್ಕಾರ ‘ದೇಶ ದ್ರೋಹ’ದ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಪ್ರಗತಿಪರ ಚಿಂತಕರಾದ ಎಸ್.ಐ.ಮುನೀರ್ ಅಹಮದ್, ಪ್ರಕಾಶ್ ಆಚಾರ್ಯ, ಕೆ.ಜಿ.ಪೀಟರ್, ಹೆಚ್.ಎ.ಹಂಸ, ದೀಪಕ್ ಪೊನ್ನಪ್ಪ, ಡಿ.ಎಸ್.ನಿರ್ವಾಣಪ್ಪ, ಬೇಕಲ್ ರಮಾನಾಥ್, ಕೆ.ಬಿ.ರಾಜು, ಎಂ.ಎಂ.ಮೊಹಮ್ಮದ್ ಯಾಕುಬ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









