
ಮಡಿಕೇರಿ ಅ.13 NEWS DESK : ಹುದಿಕೇರಿ ಮಾಜಿ ಸೈನಿಕರ ಸಂಘದಿಂದ ದಕ್ಷಿಣ ಕೊಡಗಿನ ಅಂಜಿಗೇರಿ ನಾಡ್‍ನ ಹುದಿಕೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಅಮರ್ ಜವಾನ್ ಸ್ಮಾರಕ’ ಮತ್ತು ಧ್ವಜ ಸ್ತಂಭದ ಉದ್ಘಾಟನಾ ಸಮಾರಂಭ ಅ.27 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹುದಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಲ್ಯಮೀದೇರಿರ ಎ. ಪ್ರಕಾಶ್, ಅಂದು ಬೆಳಗ್ಗೆ 10.30 ಗಂಟೆಗೆ ಸ್ಮಾರಕ ಮತ್ತು ಧ್ವಜ ಸ್ತಂಭವನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದು, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ ಎಂದರು. ಹುದಿಕೇರಿ ಕೊಡವ ಸಮಾಜದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಎ.ಎಸ್.ಪೊನ್ನಣ್ಣ, ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಕೆ., ಪೊನ್ನಂಪೇಟೆ ತಹಸೀಲ್ದಾರ್ ಕೆ.ಎಸ್.ಮೋಹನ್ ಕುಮಾರ್, ಕರ್ನಲ್ ಆರ್.ಮುಕುಂದನ್, ಹುದಿಕೇರಿ ಪಂಚಾಯ್ತಿ ಅಧ್ಯಕ್ಷರಾದ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕೊಟ್ಟುಕತ್ತೀರ ಸೋಮಣ್ಣ, ಕ್‍ಗ್ಗಟ್ಟುನಾಡು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಐನಂಡ ಕೆ.ಮಂದಣ್ಣ, ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕಟ್ಟೇರ ಎ.ವಿಶ್ವನಾಥ್, ಹುದಿಕೇರಿ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷರಾದ ಬಯವಂಡ ಯು.ಕಾಳಪ್ಪ, ಹಿರಿಯ ಸಲಹೆಗಾರರಾದ ಮಂಡೆಚಂಡ ದಿನೇಶ್ ಚೆಟ್ಟಿಯಪ್ಪ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಹುತಾತ್ಮ ಯೋಧರ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮೂರು ತಿಂಗಳ ಅವಧಿಯಲ್ಲಿ ಅಂಜಿಗೇರಿ ನಾಡಿನ ಮಾಜಿ ಸೈನಿಕರ ಸಹಕಾರದಿಂದ 12 ಲಕ್ಷ ರೂ. ವೆಚ್ಚದಲ್ಲಿ ಅಮರ್ ಜವಾನ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರಲ್ಲಿ ಅಂಜಿಗೇರಿ ನಾಡಿನ ಹುತಾತ್ಮ ಯೋಧರ ನಾಮಫಲಕವನ್ನು ಅಳವಡಿಸಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹುದಿಕೇರಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಚಕ್ಕೇರ ಎಂ.ರಮೇಶ್, ಕಾರ್ಯದರ್ಶಿ ಬೊಜ್ಜಂಗಡ ಎಂ.ತಿಮ್ಮಯ್ಯ, ಖಜಾಂಚಿ ಬೊಳ್ಳಜಿರ ಬಿ.ಕಿಶೋರ್, ಸಂಘಟನಾ ಸಂಚಾಲಕ ಕಿರಿಯಮಾಡ ಮಿಲನ್ ಗಣಪತಿ ಹಾಗೂ ನಿರ್ದೇಶಕ ಮಲ್ಲೇಂಗಡ ಜಯಾ ಉತ್ತಯ್ಯ ಉಪಸ್ಥಿತರಿದ್ದರು.









