ಮಡಿಕೇರಿ ಅ.21 NEWS DESK : ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎರಡನೇ ಅವಧಿಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಆರು ತಿಂಗಳುಗಳೇ ಕಳೆದಿದ್ದರೂ ನಿಯಮಾನುಸಾರ ಸಭೆ ನಡೆಸದೆ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಲಾಗಿದೆ. ಮುಂದಿನ ಎರಡು ವಾರದೊಳಗೆ ಸಾಮಾನ್ಯ ಸಭೆಯನ್ನು ನಡೆಸದಿದ್ದರೆ ಪ್ರಕರಣ ಸಂಖ್ಯೆ 47(3) ಪ್ರಕಾರ ಅಭಿವೃದ್ಧಿಯ ದೃಷ್ಟಿಯಿಂದ ನಾವುಗಳೇ ಸಭೆ ಕರೆಯುತ್ತೇವೆ ಎಂದು ನಗರಸಭೆಯ ವಿರೋಧ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಅವರು ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 47(1) ರ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಒಂದು ಸಭೆಯನ್ನಾದರೂ ನಡೆಸಬೇಕು. ಆದರೆ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಕಳೆದ ಆರು ತಿಂಗಳಿನಲ್ಲಿ ಕೇವಲ ಒಂದು ಸಾಮಾನ್ಯ ಸಭೆ ಮತ್ತು ಒಂದು ತುರ್ತು ಸಭೆಯನ್ನು ಮಾತ್ರ ನಡೆಸಿ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿದರು. ತಕ್ಷಣ ಸಭೆ ನಡೆಸಬೇಕೆಂದು ಒತ್ತಾಯಿಸಿ ಅಧ್ಯಕ್ಷರಿಗೆ ಇಂದು ಎಸ್‍ಡಿಪಿಐ ವತಿಯಿಂದ ನವಿಪತ್ರ ಸಲ್ಲಿಸಿದ್ದು, ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಸಭೆ ನಡೆಸದೇ ಇದ್ದರೆ ನಗರದ ಅಭಿವೃದ್ಧಿ ಮತ್ತು ಜನರ ಹಿತದೃಷ್ಟಿಯಿಂದ ಪೌರಸಭೆಗಳ ಅಧಿನಿಯಮದಡಿ ನಾವುಗಳೇ ಸಭೆ ಕರೆಯುತ್ತೇವೆ ಎಂದರು. ಬಿಜೆಪಿ ನೇತೃತ್ವದ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಅಭಿವೃದ್ಧಿ ಶೂನ್ಯವಾಗಿದೆ. ಒಳಜಗಳ ಮತ್ತು ಸ್ವಹಿತಾಸಕ್ತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಅನಿತಾ ಪೂವಯ್ಯ ಅವರ ನೇತೃತ್ವದ ಆಡಳಿತ ಮಂಡಳಿ ಕೂಡ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇವರ ಅವಧಿಯಲ್ಲಿ ನಗರೋತ್ಥಾನದ ಅನುದಾನ 5 ಕೋಟಿ ರೂ.ಗಳಷ್ಟು ಖರ್ಚಾಗದೆ ಸರಕಾರಕ್ಕೆ ವಾಪಾಸ್ಸಾಗಿದೆ ಎಂದು ಆರೋಪಿಸಿದರು. ಈಗಿನ ಆಡಳಿತ ಮಂಡಳಿ ನಗರೋತ್ಥಾನದ ಅನುದಾನವನ್ನು ಶೇ.30 ರಷ್ಟು ಮಾತ್ರ ಖರ್ಚು ಮಾಡಿದ್ದು, ಶೇ.70ರಷ್ಟು ಅನುದಾನ ಹಾಗೇ ಉಳಿದುಕೊಂಡಿದೆ. ನಗರದ ಜನತೆ ತಕ್ಷಣ ಎಚ್ಚೆತ್ತುಕೊಳ್ಳದಿದ್ದಲ್ಲಿ ನಗರಸಭೆಯ ನಿರ್ಲಕ್ಷ್ಯದಿಂದ ಸುಮಾರು 20 ಕೋಟಿ ರೂ.ಗಳಷ್ಟು ಅನುದಾನ ಸರಕಾರಕ್ಕೆ ವಾಪಾಸ್ಸಾಗಲಿದೆ ಎಂದು ಗಮನ ಸೆಳೆದರು. ನಗರದಲ್ಲಿ ಸುಮಾರು 1400 ನಿವೇಶನ ರಹಿತ ಬಡವರಿದ್ದು, ಇವರಿಗೆ ನಿವೇಶನ ಒದಗಿಸುವ ಕಾಳಜಿಯನ್ನು ತೋರುತ್ತಿಲ್ಲ. ಅಸಂಖ್ಯಾತ ಬೀದಿ ನಾಯಿಗಳು ಅಪಾಯಕಾರಿಯಾಗಿ ಸಂಚರಿಸುತ್ತಿವೆ. ತೀವ್ರ ಮಳೆಯಿಂದಾಗಿ ರಸ್ತೆ ಮತ್ತು ಚರಂಡಿಗಳು ಹದಗೆಟ್ಟಿವೆ, ನಗರದಲ್ಲಿ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನಗರಸಭೆಯ ಹಿಡಿತದಲ್ಲಿಲ್ಲ, ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಧೈರ್ಯ ತೋರುತ್ತಿಲ್ಲವೆಂದು ಆರೋಪಿಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾಗ ಸಭೆಗಳನ್ನು ನಡೆಸಿ ಅಭಿವೃದ್ಧಿಪರ ಕಾಳಜಿ ತೋರಿದ್ದರು. ಆದರೆ ಅಧಿಕಾರದಲ್ಲಿರುವ ಬಿಜೆಪಿ ಜನರ ಹಿತವನ್ನು ಕಡೆಗಣಿಸಿದೆ, ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ ಅಮೀನ್ ಮೊಹಿಸಿನ್, ತಕ್ಷಣ ಸಾಮಾನ್ಯ ಸಭೆ ನಡೆಸುವಂತೆ ಒತ್ತಾಯಿಸಿದರು. ನಗರಸಭಾ ಸದಸ್ಯ ಹಾಗೂ ಎಸ್‍ಡಿಪಿಐ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಅವರು ಮಾತನಾಡಿ ಕೆಲವು ವರ್ಷಗಳ ಹಿಂದೆ ಯುಜಿಡಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿ ವಿಫಲವಾಗಿದ್ದು, ಸುಮಾರು 70 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಇದೀಗ ಅಮೃತ್ ಕುಡಿಯುವ ನೀರಿನ ಯೋಜನೆಯಡಿ ರಸ್ತೆಗಳನ್ನು ಅಗೆದು ಹಾಕಲಾಗುತ್ತಿದ್ದು, ಕೋಟಿಗಟ್ಟಲೆ ಹಣ ವ್ಯರ್ಥವಾಗುತ್ತಿದೆ. ನಗರದ ವಿವಿಧೆಡೆ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿವೆ, ಕೆಲವು ಕಟ್ಟಡಗಳು ರಸ್ತೆ ಮತ್ತು ಪಾರ್ಕಿಂಗ್ ಗೆ ಜಾಗ ಬಿಡದೆ ನಿಯಮ ಉಲ್ಲಂಘಿಸಿವೆ. ಆದರೆ ನಗರಸಭೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಈ ಹಿಂದಿನ ಶಾಸಕರು ಹಾಗೂ ಈಗಿನ ಶಾಸಕರು ನಗರಸಭೆಗೆ ಯಾವುದೇ ವಿಶೇಷ ಅನುದಾನ ತರಲಿಲ್ಲ ಎಂದು ಟೀಕಿಸಿದ ಅವರು, ಇನ್ನಾದರೂ ವಿಶೇಷ ಅನುದಾನ ಕೋರಲು ಸರಕಾರದ ಬಳಿಗೆ ನಿಯೋಗ ಕರೆದೊಯ್ಯಬೇಕು ಎಂದು ಒತ್ತಾಯಿಸಿದರು. ಮತ್ತೊಬ್ಬ ಸದಸ್ಯ ಬಶೀರ್ ಅಹಮ್ಮದ್ ಅವರು ಮಾತನಾಡಿ ನಗರಸಭೆ ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯೆ ಮೇರಿ ವೇಗಸ್, ಎಸ್‍ಡಿಪಿಐ ನಗರಾಧ್ಯಕ್ಷ ಮಹಮ್ಮದ್ ಆಲಿ ಹಾಗೂ ಕಾರ್ಯದರ್ಶಿ ಜಲೀಲ್ ಮಡಿಕೇರಿ ಉಪಸ್ಥಿತರಿದ್ದರು.











