ವಾಷಿಂಗ್ಟನ್ ಅ.22 NEWS DESK : ಅನಿವಾಸಿ ಭಾರತೀಯರೊಂದಿಗೆ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೀಪಾವಳಿ ಆಚರಿಸಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದಾರೆ. ದೀಪಾವಳಿ ಹಿನ್ನೆಲೆ ಅಮೆರಿಕಾದ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕ್ಯಾಂಡಲ್‌ನಿಂದ ದೀಪ ಹಚ್ಚಿ ದೀಪ ಬೆಳಗಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾತನಾಡಿರುವುದಾಗಿ ತಿಳಿಸಿದರು. ಭಾರತದ ಜನತೆಗೆ ದೀಪಾವಳಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ನಾನು ಇಂದು (ಅ.20) ನಿಮ್ಮ ಪ್ರಧಾನ ಮಂತ್ರಿ ಮೋದಿಯವರೊಂದಿಗೆ ಮಾತನಾಡಿದೆ. ನಮ್ಮ ಸಂಭಾಷಣೆ ಬಹಳ ಉತ್ತಮವಾಗಿತ್ತು. ನಾವು ವ್ಯಾಪಾರದ ಬಗ್ಗೆ ಮಾತನಾಡಿದೆವು. ಆ ಬಗ್ಗೆ ಅವರು ಬಹಳ ಆಸಕ್ತಿ ಹೊಂದಿದ್ದಾರೆ. ಸ್ವಲ್ಪ ಸಮಯದ ಹಿಂದೆ, ನಾವು ಪಾಕಿಸ್ತಾನದೊಂದಿಗೆ ಯಾವುದೇ ಯುದ್ಧ ಬೇಡ ಎಂದು ಮಾತನಾಡಿಕೊಂಡಿದ್ದೆವು. ಈ ವೇಳೆ ವ್ಯಾಪಾರದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಯುದ್ಧ ನಡೆಯೋದಿಲ್ಲ. ಇದು ಬಹಳ, ಬಹಳ ಒಳ್ಳೆಯ ವಿಷಯ ಎಂದು ಹೇಳಿದರು. ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಾಗಿದ್ದಾರೆ. ದೀಪ ಬೆಳಗಿಸುವುದು ನಾವು ಕತ್ತಲೆಯ ಮೇಲೆ ಬೆಳಕಿನ ವಿಜಯದ ನಂಬಿಕೆಯ ಸಂಕೇತವಾಗಿ ದೀಪವನ್ನು ಬೆಳಗುತ್ತೇವೆ. ಇದು ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಡುಕಿನ ಮೇಲೆ ಒಳ್ಳೆಯತನದ ವಿಜಯ. ದೀಪಾವಳಿಯ ಸಮಯದಲ್ಲಿ, ಸಂಭ್ರಮಿಸುವವರು ಶತ್ರುಗಳನ್ನು ಸೋಲಿಸಿದ, ಅಡೆತಡೆಗಳನ್ನು ನಿವಾರಿಸಿದ ಮತ್ತು ಬಂಧಿತರನ್ನು ಬಿಡುಗಡೆ ಮಾಡಿದ ಪ್ರಾಚೀನ ಕಥೆಗಳನ್ನು ಸ್ಮರಿಸಲಾಗುತ್ತದೆ. ಬುದ್ಧಿವಂತಿಕೆಯ ಮಾರ್ಗವನ್ನು ಹುಡುಕಲು, ಶ್ರದ್ಧೆಯಿಂದ ಕೆಲಸ ಮಾಡಲು ದೀಪ ಜ್ವಾಲೆ ನೆನಪಿಸುತ್ತದೆ ಎಂದು ತಿಳಿಸಿದರು.










