ಮಡಿಕೇರಿ NEWS DESK ನ.2 : ಕುಶಾಲನಗರ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನ್ಯಾಷನಲ್ ಕಾಲೇಜ್ ನ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ ಅವರು ಇತಿಹಾಸ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಹೋರಾಟಗಾರರು, ಕನ್ನಡ ನಾಡಿನ ಶಿಲ್ಪಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಕನ್ನಡಿಗರು ವಿವಿಧ ಕ್ಷೇತ್ರಗಳಿಗೆ ನೀಡಿರುವ ಅಪಾರ ಕೊಡುಗೆಯ ಕುರಿತು ವಿವರಿಸಿದರು. ಚಂದದ ಬೀಡು, ಗಂಧದ ನಾಡಾದ ಕರ್ನಾಟಕವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು. ಜ್ಞಾನಗಂಗಾ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಅವರು ಮಾತನಾಡಿ ಕನ್ನಡ ಒಂದು ಸುಂದರ ಮತ್ತು ಶ್ರೀಮಂತ ಭಾಷೆಯಾಗಿದೆ, ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಅದು ನಮಗೆ ಹೆಮ್ಮೆಯ ವಿಚಾರವಾಗಿದೆ. ಒಂದು ಭಾಷೆ ನಾಶವಾದರೆ ಜನಾಂಗವೇ ನಾಶವಾದಂತೆ, ಹಾಗಾಗಿ ಜನ್ಮ ಕೊಟ್ಟ ತಾಯಿಯಷ್ಟೇ ನಮ್ಮ ಭಾತೃಭಾಷೆಯನ್ನು ನಾವು ಪ್ರೀತಿಸಿ, ಗೌರವಿಸಿ, ಬೆಳೆಸಬೇಕು. ಇದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು. ಕನ್ನಡ ನಾಡು, ನುಡಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಜ್ಞಾನಗಂಗಾ ಶಾಲೆಯ ಪ್ರಾಂಶುಪಾಲರಾದ ಸತ್ಯ ಸುಲೋಚನ, ಉಪ ಪ್ರಾಂಶುಪಾಲರು, ಶಿಕ್ಷಕ ವೃಂದ, ಶಾಲಾ ಆಡಳಿತ ಮಂಡಳಿ, ಧರ್ಮದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.











