
ಬೆಂಗಳೂರು ನ.20 NEWS DESK : ಕರ್ನಾಟಕ ವಿಧಾನಸಭೆಯ 2025 ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕದ, ಪರಿಶೀಲನ ಸಮಿತಿಯ ಸಭೆ ಇಂದು ಬೆಂಗಳೂರಿನ ವಿಧಾನಸೌಧದ ಕೊಠಡಿಯಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಘನ ಸರಕಾರದ ಕಂದಾಯ ಸಚಿವರು ಹಾಗೂ ಪರಿಶೀಲನ ಸಮಿತಿಯ ಅಧ್ಯಕ್ಷರಾದ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎಸ್.ಪೊನ್ನಣ್ಣ ಅವರು, ಮಡಿಕೇರಿ ಶಾಸಕರಾದ ಮಂಥರ್ ಗೌಡ ಉಪಸ್ಥಿತರಿದ್ದರು. ಕೊಡಗು ಜಿಲ್ಲೆಯ ದಶಕಗಳ ಸಮಸ್ಯೆಯಾಗಿರುವ ಪಟ್ಟೇದಾರ್ ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವ ಸಂಬಂಧ ಇಂದು ಮೂರನೇ ಬಾರಿಗೆ ಕರ್ನಾಟಕ ವಿಧಾನಸಭೆ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯವರೊಂದಿಗೆ ಚರ್ಚಿಸಿದ ಶಾಸಕರಾದ ಎ.ಎಸ್ ಪೊನ್ನಣ್ಣ, ಕೊಡಗಿನ ಜನತೆಗೆ ಮಾರಕವಾದ ಕೆಲವು ತಿದ್ದುಪಡಿಗಳನ್ನು ಕೈ ಬಿಟ್ಟು, ಕಂದಾಯ ವಿಷಯದಲ್ಲಿ ಹಲವು ದಶಕಗಳಿಂದ ಸಂಕಷ್ಟದಲ್ಲಿರುವ ಕೊಡಗಿನ ಜನತೆಗೆ ಪೂರಕವಾದ ನಿಯಮಗಳನ್ನು ರೂಪಿಸುವ ಸಲಹೆ ನೀಡಿದರು. ಸಭೆಯಲ್ಲಿ ಇನ್ನೂ ಹಲವು ವಿಷಯಗಳಿಗೆ ಸಂಬಂಧಿಸಿ ಮಹತ್ವದ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಸಮಿತಿಯ ಸದಸ್ಯರೊಂದಿಗೆ ಕೊಡಗು ಜಿಲ್ಲಾ ಅಧಿಕಾರಿಗಳು ವೆಂಕಟ್ ರಾಜ್, ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.









