
ವಿರಾಜಪೇಟೆ ಜೂ.13 NEWS DESK : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ವಿರಾಜಪೇಟೆಯಲ್ಲಿ ಹೆಚ್‍ಪಿವಿ ಲಸಿಕೆ (ಗರ್ಭ ಕಂಠ ಕ್ಯಾನ್ಸರ್ ತಡಗಟ್ಟುವ ಚುಚ್ಚುಮದ್ದು) ಬಗ್ಗೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಆಕಾಶ್, ಆರೋಗ್ಯ ನಿರೀಕ್ಷಣ ಅಧೀಕ್ಷಕಿ ಬಿ.ಎಸ್ ದುಂಭಿತ, ಶುಶ್ರೂಷಕಿ ಭವ್ಯ ಅವರು ಗರ್ಭ ಕಂಠ ಕ್ಯಾನ್ಸರ್ ತಡಗಟ್ಟುವ ಚುಚ್ಚುಮದ್ದು ಇದರ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮಾಸವು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದರು. ಗರ್ಭಕಂಠದ ಕ್ಯಾನ್ಸರ್‍ನ ಆರಂಭಿಕ ರೋಗನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವ ಶಿಫಾರಸುಗಳ ಮಹತ್ವವನ್ನು ಒತ್ತಿಹೇಳಲು ಹಲವಾರು ಅಭಿಯಾನಗಳು ಮತ್ತು ಚಟುವಟಿಕೆಗಳ ಮೂಲಕ ಗರ್ಭಕಂಠದ ಕ್ಯಾನ್ಸರ್‍ನ ಜಾಗೃತಿ ಮೂಡಿಸಲು ವಿವಿಧ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಗುಂಪುಗಳು ಒಟ್ಟಾಗಿ ಸೇರಿಕೊಂಡಿವೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು. ಗರ್ಭಕಂಠದ ಕ್ಯಾನ್ಸರ್ ಎಂದರೆ ಗರ್ಭಕಂಠ ಅಥವಾ ಗರ್ಭಾಶಯದ ಕೆಳಗಿನ ಭಾಗವನ್ನು ಒಳಗೊಳ್ಳುವ ಜೀವಕೋಶಗಳ ಅಸಹಜ ಬೆಳವಣಿಗೆ ಅಥವಾ ಪ್ರಸರಣ ಇರುವ ಸ್ಥಿತಿ. ಇದು ಮಹಿಳೆಯರಲ್ಲಿ ನಾಲ್ಕನೇ ಪ್ರಮುಖ ಕ್ಯಾನ್ಸರ್ ಆಗಿದೆ. ಭಾರತದಲ್ಲಿ ಪ್ರತಿ ವರ್ಷ ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್‍ನ ನಾಲ್ಕನೇ ಒಂದು ಭಾಗದಷ್ಟು ಪ್ರಕರಣಗಳು (ಹೊಸ ಪ್ರಕರಣಗಳು) ಕಂಡುಬರುತ್ತಿದ್ದು, ಮರಣ ಪ್ರಮಾಣವು ಸುಮಾರು ಮೂರನೇ ಒಂದು ಭಾಗದಷ್ಟಿದೆ. ಆದ್ದರಿಂದ, ಗರ್ಭಕಂಠದ ಕ್ಯಾನ್ಸರ್ ಅಪಾಯದ ಅಂಶಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲು ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಅಗತ್ಯವಿದೆ ಎಂದರು. ಆಗಾಗ್ಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯ ಅಗತ್ಯತೆ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. 25 ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಾಥಮಿಕ ಹೆಚ್‍ಪಿವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಹಲವಾರು ಉಪಯುಕ್ತ ಮಾಹಿತಿ ನೀಡಿದರು. ಈ ಸಂದರ್ಭ 17 ಮಕ್ಕಳಿಗೆ ಚುಚ್ಚುಮದ್ದು ನೀಡಲಾಯಿತು. ಡೆಂಗ್ಯು ಜ್ವರ ಕುರಿತಂತೆ ಮಾಹಿತಿ, ಮಾಸಾಚರಣೆ ಹಾಗೂ ಖಾಯಿಲೆ ಹರಡುವ ಬಗ್ಗೆ, ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಪೆÇೀಕ್ಸೋ, ಗುಡ್ ಟಚ್, ಬ್ಯಾಡ್ ಟಚ್, ಹದಿಹರೆಯದ ಸಮಸ್ಯೆ ಬಗ್ಗೆ ತಿಳಿಸಿದರು. ಬಳಿಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭ ನಿಲಯದ ಮೇಲ್ವಿಚಾರಕರಾದ ಸುಮಯ್ಯ ಕೆ.ಎಂ ಮತ್ತು ಸಿಬ್ಬಂದಿಗಳು ಹಾಜರಿದ್ದರು.









