
ಮಡಿಕೇರಿ ಜೂ.13 NEWS DESK : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ನಗರದ ಕೋಟೆ ಮಹಿಳಾ ಸಮಾಜ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಯುವಜನರನ್ನು ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಸಮಾಜದ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಡಿಕೇರಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ರಘು ಹೆಬ್ಬಟ್ಟಗೇರಿ, ಉಪಾಧ್ಯಕ್ಷರಾಗಿ ದಿನೇಶ್ ಟಿ., ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ದರ್ಶಿತ್, ಖಜಾಂಚಿಯಾಗಿ ಪ್ರಕಾಶ್ ಮೊಗೇರ ಹಾಗೂ ಪ್ರಚಾರಕರಾಗಿ ವಿವೇಕ್ ಮೊಗೇರ ಅವರು ಆಯ್ಕೆಯಾದರು. ಇದೇ ವೇಳೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್, ಶ್ರೀನಿವಾಸ್, ಸುರೇಶ್ ಎಂ.ಕೆ., ರಾಜೇಶ್, ಶಶಿ ಮರ್ಗೋಡು, ವಿಶ್ವನಾಥ್ ಹಾಗೂ ಹರೀಶ್ ಬೆಟ್ಟಗೇರಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಸಮಾಜದ ಅಭಿವೃದ್ಧಿಗೆ ಹೊಸ ತಂಡವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಸಮಾಜದ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಮಾತನಾಡಿ, ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಮಾಜದ ಬೆಳವಣಿಗೆಗೆ ಹೊಸ ತಂಡ ಉತ್ತಮ ನಾಯಕತ್ವ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ಮುಖಂಡ ಪಿ.ಎಂ. ರವಿ ಮಾತನಾಡಿ, ಸಮಾಜದ ಏಕತೆ ಮತ್ತು ಸಹಕಾರವೇ ಸಂಘಟನೆಯ ಶಕ್ತಿಯಾಗಿದ್ದು, ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸಮಾಜದ ಮುಂದಿನ ಪೀಳಿಗೆಯನ್ನು ಸಂಘಟನೆಯೊಂದಿಗೆ ಜೋಡಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ದಾಮೋದರ ಮಾತನಾಡಿ, ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಮಾಜದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಸಿ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ, ಗೌರವ ಸಲಹೆಗಾರ ಪಿ.ಎಂ. ರವಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ದಾಮೋದರ, ಸಮಿತಿಯ ಹಿರಿಯ ಸದಸ್ಯ ಸೋಮಣ್ಣ, ಹಾಗೂ ಸಮಾಜದ ಕಾರ್ಯಸಮಿತಿ ಸದಸ್ಯರಾದ ರಘು ಹೆಬ್ಬಟ್ಟಗೇರಿ, ಪ್ರಕಾಶ್, ಸುರೇಶ್, ರಮೇಶ್, ಶ್ರೀನಿವಾಸ್, ಅಶೋಕ್, ದಿನೇಶ್, ದರ್ಶಿತ್, ರಾಕೇಶ್, ವಿಶ್ವನಾಥ್, ವಿವೇಕ್ ಮೊಗೇರ, ಹರೀಶ್ ಬೆಟ್ಟಗೇರಿ, ರಾಜೇಶ್, ಶಶಿ ಮರಗೋಡು ಸೇರಿದಂತೆ ಸಮಾಜದ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಬಳಿಕ ಭಾಗವಹಿಸಿದ್ದ ಎಲ್ಲ ಸಮಾಜ ಬಾಂಧವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ ಸಮಾಜದ ಹಿರಿಯರು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಕೊನೆಯಲ್ಲಿ ರಮೇಶ್ ವಂದನಾರ್ಪಣೆ ಸಲ್ಲಿಸಿದರು. ನೂತನ ತಂಡಕ್ಕೆ ಶುಭ ಹಾರೈಸುವ ಮೂಲಕ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವರದಿ : ಅಶೋಕ್ ಮಡಿಕೇರಿ









