ವಿರಾಜಪೇಟೆ ನ.24 NEWS DESK : ರಾಜ್ಯ ಸರಕಾರದ ವಿಶೇಷ ಅನುದಾನದ ಅಡಿಯಲ್ಲಿ ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿನ ನೆಹರು ನಗರದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ 20 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ, ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕ ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ತಾವೇ ಸ್ವತಃ ನೂತನ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ವೇದಿಕೆಗೆ ತೆರಳಿದರು. ಬಳಿಕ ಸ್ಥಳಿಯರ ಮನವಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುರಸಭೆ ಅಧ್ಯಕ್ಷರಾಗಿದ್ದ ದೇಚಮ್ಮ ಅವರ ಮುತುವರ್ಜಿಯಿಂದ ಇಂದು ಉತ್ತಮ ರಸ್ತೆ ನೆಹರುನಗರಕ್ಕೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ದೇಚಮ್ಮ ಅವರು ಮನವಿ ಮಾಡುವುದರೊಂದಿಗೆ ಒತ್ತಾಯವನ್ನೇ ಮಾಡುತ್ತಾರೆ. ಇದರ ಪರಿಣಾಮವಾಗಿ ಹಾಗೂ ಎಲ್ಲ ರಸ್ತೆಗಳು ಅಭಿವೃದ್ದಿಯಾಗಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಅನುದಾನ ತಂದು ಕಾಮಗಾರಿ ಮಾಡುತ್ತಿದ್ದೇವೆ. ಮಳೆಯಿಂದಾಗಿ ರಸ್ತೆಗಳು ಎಲ್ಲ ಕಡೆ ಸಂಪೂರ್ಣ ಹಾಳಾಗಿ ಹೋಗಿದೆ. ಮಳೆ ಕಡಿಮೆಯಾದ ಹಿನ್ನಲೆ ಈಗ ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಗ್ರಾಮೀಣ ಪ್ರದೇಶ ಸೇರಿದಂತೆ ಮುಖ್ಯರಸ್ತೆಗಳ ಅಭಿವೃದ್ದಿ ಕಾಮಗಾರಿ ನಡೆಸಲಾಗುತ್ತದೆ. ಈಗಾಗಲೇ ಪುರಸಭೆ ವ್ಯಾಪ್ತಿಯ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಅನುದಾನಗಳು ಬಿಡುಗಡೆಯಾಗಿದೆ. ಹಂತಹಂತವಾಗಿ ಕಾಮಗಾರಿ ಪ್ರಾರಂಭವಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಜನರ ಅಭಿವ್ರದ್ದಿಯೇ ನಮ್ಮ ಸರಕಾರದ ಮೂಲ ಉದ್ದೇಶ ಎಂದರು. ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ ಶಾಸಕ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಒದಗಿಸಲಾದ 20 ಕೋಟಿ ರೂ ಅನುದಾನದಲ್ಲಿ ಪ್ರಾರಂಭಿಸಲಾದ ಮೊದಲ ಕಾಮಗಾರಿ ಇದಾಗಿದ್ದು ಕಾಮಗಾರಿ ಪೂರ್ಣಗೊಂಡು ಇಂದು ಲೋಕಾರ್ಪಣೆಗೊಳಿಸಲಾಗಿದೆ. ನೆಹರು ನಗರ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಸಾರ್ವಜನಿಕರು ನಡೆದಾಡಲು ಕೂಡ ಕಷ್ಟಪಡಬೇಕಾಗಿತ್ತಲ್ಲದೇ ಆಟೋ ಚಾಲಕರು ಅಲ್ಲಿಗೆ ಬಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಅಲ್ಲದೆ ಹೆಚ್ಚು ಬಾಡಿಗೆ ಬೇಕೆನ್ನುತ್ತಿದ್ದರು. ಇದರಿಂದ ಇಲ್ಲಿನ ನಾಗರೀಕರಿಗೆ ಬಹಳ ಅನಾನುಕೂಲ ಉಂಟಾಗಿತ್ತು. ಇದೀಗ ನೂತನ ರಸ್ತೆ ನಿರ್ಮಾಣವಾಗಿರುವುದರಿಂದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆಯ ಮಾಜಿ ಸದಸ್ಯರುಗಳಾದ ಅಗಸ್ಟಿನ್ ಬೆನ್ನಿ, ಮಹಮ್ಮದ್ ರಾಫಿ, ಅತಿಫ್ ಮನ್ನ, ಹಮೀದ್, ದಿನೇಶ್ ನಂಬಿಯಾರ್, ಪುರಸಭೆ ಮುಖ್ಯ ಅಧಿಕಾರಿ ಪಿ.ಕೆ. ನಾಚಪ್ಪ, ವಿರಾಜಪೇಟೆ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಕಾಂಗ್ರೇಸ್ ಮುಖಂಡರಾದ ಜೋಕಿಮ್, ಮಂಜುನಾಥ್, ಸಂತೋಷ್, ವಕೀಲರಾದ ನರೇಂದ್ರ ಕಾಮತ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.











