ಕುಶಾಲನಗರ ನ.24 NEWS DESK : ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ದಿನಾಚರಣೆಯ ಪ್ರಯುಕ್ತ ಕೊಡಗು ಸೈನಿಕ ಶಾಲೆಯ ಎನ್‌ಸಿಸಿ ಘಟಕವು ಕುಶಾಲನಗರದ ಸಮೀಪವಿರುವ ಹಾರಂಗಿ ಜಲಾಶಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿತು. ಪರಿಸರ ಸಂರಕ್ಷಣೆ ಮತ್ತು ಜಲಾಶಯದ ಅಂದವನ್ನು ಹೆಚ್ಚಿಸುವ ಗುರಿಯೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಮಾದರಿಯಾದರು. ಅಭಿಯಾನದಲ್ಲಿ ಶಾಲೆಯ ಒಟ್ಟು 171 ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಐವರು ಎನ್‌ಸಿಸಿ ಅಧಿಕಾರಿಗಳು ಭಾಗವಹಿಸಿದ್ದರು. ಬೆಳಗಿನಿಂದಲೇ ಜಲಾಶಯದ ಆವರಣದಲ್ಲಿ ವಿದ್ಯಾರ್ಥಿಗಳು ಪ್ರವಾಸಿಗರ ಭೇಟಿಯಿಂದ ಸಂಗ್ರಹವಾಗಿದ್ದ ಎಲ್ಲ ರೀತಿಯ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಹಾರಂಗಿ ಜಲಾಶಯ ಪ್ರದೇಶದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪಾಲಿಥಿನ್ ಚೀಲಗಳು, ಕಾಗದ ಮತ್ತು ಇತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವೈಜ್ಞಾನಿಕ ಕ್ರಮದಲ್ಲಿ ತ್ಯಾಜ್ಯವನ್ನು ಬೇರ್ಪಡಿಸಿ, ಅದನ್ನು ಸೂಕ್ತ ವಿಲೇವಾರಿಗಾಗಿ ವ್ಯವಸ್ಥಿತವಾಗಿ ಸಂಗ್ರಹಿಸಿದರು. ಅಭಿಯಾನದಲ್ಲಿ ಶಾಲೆಯ ಎನ್ ಸಿ ಸಿ ಘಟಕದ ಲೆಫ್ಟಿನೆಂಟ್ ವಿಬಿನ್ ಕುಮಾರ್, ಎಫ್- ಒ ಮಂಜಪ್ಪ ಜಿ.ಕೆ, ಎಫ್-ಒ ವೆಂಕಟ ರಮಣ ವೈ, ಟಿ-ಒ ಪ್ರತಿಭಾ ಕಲ್ಯಾಣಿ, ಸುಬೇದಾರ್ ಬಲ್ ಬೀರ್ ಸಿಂಗ್, ಹವಾಲ್ದಾರ್ ಪ್ರವೀಣ್ ಪಕಾಲೆ ಭಾಗವಹಿಸಿದ್ದರು. ಅಭಿಯಾನವು ಪ್ರಾಂಶುಪಾಲರಾದ ಕರ್ನಲ್ ಅಮರ್ ಜಿತ್ ಸಿಂಗ್, ಆಡಳಿತ ಅಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಮತ್ತು ಉಪ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಕಮಾಂಡಿಂಗ್ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಮಹಮ್ಮದ್ ಶಾಜಿ ಅವರ ಸಕ್ರಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ನಡೆಯಿತು.











