ಮಡಿಕೇರಿ ನ.24 NEWS DESK : ಅಂಗನವಾಡಿಯ ನಿವೃತ್ತ ಕಾರ್ಯಕರ್ತೆ ಹಾಗೂ ಮಡಿಕೇರಿಯ ಸಮಾಜ ಸೇವಕಿ ಎಂ.ಸಿ.ಚಿನ್ನಮ್ಮ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ರಾಜ್ಯ ಮಟ್ಟದ ನಾಗರೀಕ ಸೇವಾ ಪ್ರಶಸ್ತಿ ‘ಕರುನಾಡ ರತ್ನ’ವನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ದಯಾನಂದ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಂಗನವಾಡಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಎಂ.ಸಿ.ಚಿನ್ನಮ್ಮ ಅವರು ಪುಟಾಣಿಗಳ ಮೇಲಿನ ಪ್ರೀತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಪ್ರಯತ್ನದಿಂದ ಜಾಗವನ್ನು ಹುಡುಕಿಕೊಟ್ಟರು. ಸರಕಾರದಿಂದ ಜಾಗ ಮಂಜೂರು ಮಾಡಿಸಿ ಅದೇ ಸ್ಥಳದಲ್ಲಿ ಶಾಶ್ವತವಾದ ಅಂಗನವಾಡಿ ಕೇಂದ್ರ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಲಭ್ಯವನ್ನು ದೊರಕಿಸಿಕಟ್ಟಿದ್ದಾರೆ. ಸುಮಾರು 25 ವರ್ಷಗಳಿಂದ ಮಕ್ಕಳಿಗೆ ಆಟಪಾಠ, ಮನರಂಜನೆ. ಶಾಲಾಪೂರ್ವ ಪರಿಸರ ಜ್ಞಾನ, ಆರೋಗ್ಯ ಮತ್ತಿತರ ಶೈಕ್ಷಣಿಕ ವಿಚಾರಗಳ ಕುರಿತು ತಿಳುವಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು ಮತ್ತು ಪುಸ್ತಕ, ಬಟ್ಟೆಯನ್ನು ಕೊಡಿಸುವ ಕಾರ್ಯ ಮಾಡಿದ್ದಾರೆ. ವೈದ್ಯರನ್ನು ಸಂಪರ್ಕಿಸಿ ಬಡತನದಲ್ಲಿರುವ ರೋಗಿಗಳಿಗೆ ಬೇಕಾದ ಉಚಿತ ಔಷಧ ದೊರಕಿಸಿಕೊಟ್ಟಿದ್ದಾರೆ. ಅನಾಥ ಶವಸಂಸ್ಕಾರ ಚಿನ್ನಮ್ಮ ಅವರು ಮಾಡಿದ ಮಾನವೀಯ ಸೇವೆಗಳಲ್ಲಿ ಒಂದಾಗಿದೆ. ಅಂಗನವಾಡಿ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಚಿನ್ನಮ್ಮ ಅವರ ಉತ್ತಮ ಸೇವೆಗಾಗಿ 2003-04ರಲ್ಲಿ ರಾಜ್ಯ ಪ್ರಶಸ್ತಿ ಲಭಿಸಿದೆ. ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ ವಂತಿಯಿಂದಲೂ ಪ್ರಶಸ್ತಿ ದೊರೆತ್ತಿದೆ. ಸುದೀರ್ಘ 25 ವರ್ಷಗಳ ಸೇವೆಯ ನಂತರ 2016 ಜೂ.1ರಂದು ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರ ಮಕ್ಕಳ ಉಪಯೋಗಕ್ಕೆಂದು ಗೋಡೆಬರಹವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಟ್ಟಿದ್ದಾರೆ. ನಿವೃತ್ತಿಯಾದ ನಂತರದ ದಿನಗಳಲ್ಲಿ ಚಿನ್ನಮ್ಮ ಅವರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು, ಮಹಿಳೆಯರಿಗೆ ಸ್ವಉದ್ಯೋಗದ ತರಬೇತಿ ನೀಡುವುದು, ಶಾಲೆ ಬಿಟ್ಟ ಮಕ್ಕಳ ಸರ್ವೇ ಕಾರ್ಯ, ಪ್ರವಾಹ ಮತ್ತು ಭೂಕುಸಿತವಾದ ಪ್ರದೇಶಗಳ ಮನೆಗಳು ಹಾಗೂ ಜನರ ಮಾಹಿತಿ ಸಂಗ್ರಹ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಪಾನ್ ಕಾರ್ಡ್, ವೃದ್ಧಾಪ್ಯ ವೇತನ, ಜೀವವಿಮೆ ಮತ್ತು ವಿಕಲಚೇತನರಿಗೆ ಮಾಸಾಶನ ಕೊಡಿಸಲು ನೆರವಾಗಿದ್ದಾರೆ. ರಾಷ್ಟ್ರೀಯ ವಿಪತ್ತಿನಂತಹ ತುರ್ತು ಸಂದರ್ಭಗಳಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದ ವಾರಿಯರ್ ಆಗಿ ಸೇವೆ ಸಲ್ಲಿಸಿದ ಕಾರಣಕ್ಕಾಗಿ ಅಭಿನಂದನಾ ಪತ್ರ ಪಡೆದಿದ್ದಾರೆ. ಮಡಿಕೇರಿ ನಗರಸಭೆಯ ಟಾಸ್ಕ್‌ಫೋರ್ಸ್‌ನಲ್ಲಿ ವಾರಿಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿಧಾನಸಭಾ ಕ್ಷೇತ್ರದ 199 ಮತಗಟ್ಟೆಯ ಹಂತದ ಅಧಿಕಾರಿಯಾಗಿ ಕಳೆದ ಅನೇಕ ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಸೇವೆಯನ್ನು ಗುರುತಿಸಿ ಚುನಾವಣಾ ಆಯೋಗವು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದೆ. ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಿದ ಶಿಕ್ಷಕರ ದಿನಾಚರಣೆಯಲ್ಲಿ ಎಂ.ಸಿ.ಚಿನ್ನಮ್ಮ ಅವರಿಗೆ ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿತ್ತು. ಇತ್ತೀಚೆಗೆ ನಡೆದ 114ನೇ ಮಹಿಳಾ ದಿನಾಚರಣೆಯ ಸಂದರ್ಭ ಓ.ಡಿ.ಪಿ ಸಂಸ್ಥೆ ಚಿನ್ನಮ್ಮ ಅವರಿಗೆ ಪ್ರೇರಣಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.











