ಮಡಿಕೇರಿ ನ.24 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ.26 ರಂದು 35ನೇ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ವಾಂಸ ಡಾ.ಸಂಜೀವ್ ಚೋಪ್ರಾ, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಅಡಗೂರ್ ಹೆಚ್.ವಿಶ್ವನಾಥ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ ಹಾಗೂ ಹೆಸರಾಂತ ವೈದ್ಯ, ಸಮಾಜ ಸೇವಕ ಡಾ.ಮಾತಂಡ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಾ.ಸಂಜೀವ್ ಚೋಪ್ರಾ ಅವರು ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಕುರಿತು ಮಾತನಾಡಲಿದ್ದಾರೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತ, ಎಸ್ಟಿ ವರ್ಗೀಕರಣ, ಕೊಡವ ಸ್ಯಾಕ್ರಮೆಂಟಲ್ ಗನ್-ತೋಕ್ ಹಕ್ಕು ಸೇರಿದಂತೆ ಆದಿಮಸಂಜಾತ ಏಕ-ಜನಾಂಗೀಯ, ಆನಿಮಿಸ್ಟಿಕ್ ಕೊಡವರಿಗಾಗಿ 10 ಗೌರವಾನ್ವಿತ ಗುರಿಗಳು ಹಾಗೂ ಹಕ್ಕೊತ್ತಾಯಗಳನ್ನು ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆಯಲ್ಲಿ ಮಂಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.










