ಮಡಿಕೇರಿ ನ.24 NEWS DESK : ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿಯ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಅರಿವಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡಿ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಇದರಿಂದ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿರುವ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಪೌರ ಕಾರ್ಮಿಕ ಸಮೂಹದ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಬಡವರ್ಗ, ದಲಿತ, ಕಾರ್ಮಿಕ ಸಮೂಹದ ಅಭಿವೃದ್ಧಿಗೆ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಪೌರ ಕಾರ್ಮಿಕರ ಸಂಕಷ್ಟಗಳ ನಿವಾರಣೆಗಾಗಿ ಶಾಸಕರು ಅಧಿಕಾರಿಗಳ ಮಟ್ಟದಲ್ಲಿ ಕುಂದು ಕೊರತೆ ಸಭೆಯನ್ನು ನಡೆಸುವ ಮೂಲಕ ಸಮಸ್ಯೆಗಳ ಬಗೆಹರಿಕೆಯ ನಿಟ್ಟಿನ ಪ್ರಯತ್ನಗಳನ್ನು ನಡೆಸಿದ್ದಾರೆ. ಇಂತಹ ಸಭೆ ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಯೂ ನಡೆಸಿದ್ದು ಕಂಡು ಬಂದಿಲ್ಲ. ಈ ರೀತಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು. ಶಾಸಕ ಪೊನ್ನಣ್ಣ ಅವರು ಪೌರಕಾರ್ಮಿಕರ ಮನೆಗಳಿಗೆ ತೆರಳಿ, ಅವರ ದುಃಖ ದುಮ್ಮಾನಗಳನ್ನು ಆಲಿಸಿದ್ದಾರೆ. ಪೌರ ಕಾರ್ಮಿಕರಿಗೆ ಸೂಕ್ತ ವಸತಿ, ನಿವೇಶನಗಳಿಲ್ಲದಿರುವ ವಿಚಾರವನ್ನು ಅರಿತು ಅದನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ನಡೆಸಿದ್ದಾರೆ. ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಕನಿಷ್ಟ ವೇತನ ನೀಡುವುದು ಸೇರಿದಂತೆ ಅವರಿಗೆ ಆರೋಗ್ಯ ವಿಮೆ ಒದಗಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಓರ್ವ ಉತ್ತಮ ನಾಯಕನೆಂದು ರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಗೋಣಿಕೊಪ್ಪಲಿನ ಆರ್.ವಿಜಯ ಕುಮಾರ್, ಕೊಡಗು ಜಿಲ್ಲಾಧ್ಯಕ್ಷರಾದ ಪೊನ್ನಂಪೇಟೆಯ ಪರಮೇಶ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಸುಂಟಿಕೊಪ್ಪದ ಆರ್.ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎ.ಗಿರೀಶ್ ಹಾಗೂ ವಿರಾಜಪೇಟೆ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ವಿನೋದ್ ಉಪಸ್ಥಿತರಿದ್ದರು.











